ಸಂವಿಧಾನ ಶಿಲ್ಪಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದಂತಹ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲನೆ ಮಾಡಿ, ಅವರ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಅವರಿಗೆ ನಾವು ಗೌರವ ಕೊಟ್ಟಂತಾಗುತ್ತದೆ ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Local News – ಅಂಬೇಡ್ಕರ್ ರವರ ಹಾದಿಯಲ್ಲಿ ನಡೆಯಬೇಕು
ಅಂಬೇಡ್ಕರ್ ಅವರ ಜೀವನವೇ ಒಂದು ದೊಡ್ಡ ಹೋರಾಟ. ನಾವು ಕೇವಲ ಅವರ ಬಗ್ಗೆ ಭಾಷಣಗಳನ್ನು ಕೇಳಿದರೆ ಸಾಲದು, ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಜಾಗೃತಿ ಮೂಡಿಸುವಂತಾಗಬೇಕು. ಅಂಬೇಡ್ಕರ್‌ರವರು ರಚಿಸಿಕೊಟ್ಟ ಸಂವಿಧಾನದಿಂದ ಸಮಾಜದಲ್ಲಿನ ಅನೇಕ ಅನಿಷ್ಟ ಪದ್ದತಿಗಳು ನಶಿಸಿವೆ. ಅವರ ಆದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ. ಸ್ವತಃ ತಾವು ಅನುಭವಿಸಿದಂತ ನೋವನ್ನು ತನ್ನ ಮುಂದಿನ ಪೀಳಿಗೆ ಅನುಭವಿಸಬಾರದೆಂದು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಂತಹ ವ್ಯಕ್ತಿ ಅಂಬೇಡ್ಕರ್ ರವರು ಎಂದರು.
Local News – ಬದಲಾವಣೆಗೆ ಶಿಕ್ಷಣವೊಂದೇ ಮಾರ್ಗ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ಜಿ.ಎನ್. ಲಕ್ಷ್ಮೀಪತಿ ರವರು, ಹಿಂದೆ ರಾಜಮಹಾರಾಜರು ತಮ್ಮ ಮಕ್ಕಳು ದೈಹಿಕವಾಗಿ ಬಲಿಷ್ಠರಾಗಲಿ ಮತ್ತು ಯುದ್ಧಗಳನ್ನು ಗೆಲ್ಲಲಿ ಎಂದು ಹುಲಿ ಹಾಲು ಕುಡಿಸುತ್ತಿದ್ದರು. ಆದರೆ, ಸಮಾಜದ ಶೋಷಿತ ವರ್ಗಕ್ಕೆ ಶಿಕ್ಷಣ ಎನ್ನುವ ಹುಲಿಹಾಲನ್ನು ನಿರಾಕರಿಸಲಾಗಿತ್ತು. ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಇಂದು ನಾವು ಬದುಕನ್ನು ಬದಲಿಸಿಕೊಳ್ಳಲು ಮತ್ತು ಹೋರಾಟ ಮಾಡಲು ಶಿಕ್ಷಣವೇ ಪ್ರಬಲ ಆಯುಧವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.

ಇನ್ನೂ ಸಂವಿಧಾನ ರಚನಾ ಸಭೆಯಲ್ಲಿದ್ದ ಅನೇಕರು ಅಂಬೇಡ್ಕರ್ ಅವರಿಗೆ ಸಾಥ್ ನೀಡಲಿಲ್ಲ. ಕೊನೆಗೆ ಒಬ್ಬರೇ ಕುಳಿತು, ಸುಮಾರು ತಿಂಗಳುಗಳ ಕಾಲ ಹಗಲಿರುಳು ಶ್ರಮಿಸಿ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ಅರ್ಪಿಸಿದರು. ಇದು ಕೇವಲ ಒಂದು ಪುಸ್ತಕವಲ್ಲ, ಇದು ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ರಕ್ಷಾ ಕವಚ. ಅಸಮಾನತೆಯ ವಿರುದ್ಧ ಸಿಡಿದು ನಿಂತ ಅವರು, ಹಿಂದೂ ಧರ್ಮದಲ್ಲಿನ ತಾರತಮ್ಯವನ್ನು ವಿರೋಧಿಸಿ ಬೌದ್ಧ ಧರ್ಮದ ಮೂಲಕ ಸಮಾನತೆಯ ಮಾರ್ಗವನ್ನು ಆರಿಸಿಕೊಂಡರು ಎಂದು ಅಂಬೇಡ್ಕರರ ಹೋರಾಟದ ಹಾದಿಯನ್ನು ವಿವರಿಸಿದರು. Read this also : ಕಲೆ ಗೊತ್ತಿದ್ರೆ ಜಗತ್ತನ್ನೇ ಗೆಲ್ಲಬಹುದು ಪ್ರತಿಭಾ ಕಾರಂಜಿಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಿವಿಮಾತು
Local News – ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಈ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಟಿಹೆಚ್.ಒ ಡಾ.ಅಕ್ಷಯ್, ಎಸ್.ಸಿ/ಎಸ್.ಟಿ ನೌಕರರ ಸಂಘದ ಶ್ರೀರಾಮಪ್ಪ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.
