Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯ ರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡವರು ಕಳೆದ ನಾಲ್ಕು ದಿನಗಳಿಂದ ನಿವೇಶನಗಳಿಗಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ದಲಿತ ಪ್ರತಿಭಟನಾಕಾರರು ಹಿಂಪಡೆದರು.
ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಮಂಜೂರಾದ ಜಮೀನಿನಲ್ಲೇ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳು ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ತಮಗೆ ನಿವೇಶನ ನೀಡುವ ತನಕ ನಮ್ಮ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೋರಾಟ ಕೈಗೊಂಡಿದ್ದರು. ಸ್ಥಳೀಯ ಅಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರೂ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ತಾಲೂಕು ಆಡಳಿತ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನಾ ಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ರವೀಂದ್ರ, ದಲಿತರು ಸೇರಿದಂತೆ ನಿವೇಶನ ರಹಿತರರಿಗೆಲ್ಲಾ ನಿವೇಶನ ಒದಗಿಸುವುದು ಜಿಲ್ಲಾಡಳಿತದ ಕೆಲಸವಾಗಿದೆ. ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಕಡೇಹಳ್ಳಿ ಗ್ರಾಮದ ಸ.ನಂ. 131 ರಲ್ಲಿ 2 ಎಕರೆ 15 ಗುಂಟೆ ಜಮೀನಿನಲ್ಲಿ ನಿವೇಶನ ನೀಡಲು ಮಂಜೂರು ಮಾಡಲಾಗಿತ್ತು. ಆದರೆ ಇದೇ ಸ.ನಂ. ನಲ್ಲಿ ಉಳುಮೆ ಮಾಡುತ್ತಿರುವ ರೈತರೊಬ್ಬರು ಫಾರಂ ನಂ 57 ರಲ್ಲಿ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಇದರಿಂದ ನಿವೇಶನಗಳನ್ನು ಹಂಚಿಕೆ ಮಾಡಲು ಸಮಸ್ಯೆಯಾಗಿತ್ತು. ನ್ಯಾಯಾಲಯದಲ್ಲಿ ಸ್ಟೇ ತೆರವುಗೊಳಿಸಬೇಕಿದೆ. ಜೊತೆಗೆ ಇದೇ ಸ.ನಂ ನಲ್ಲಿ ಇನ್ನೂ ಸರ್ಕಾರಿ ಜಮೀನಿದ್ದು, ಅದನ್ನು ಸರ್ವೆ ಮಾಡಿಸಿ ನಿವೇಶನ ರಹಿತರರಿಗೆ ನೀಡುವ ಕೆಲಸ ಮಾಡಲಾಗುತ್ತದೆ. ಅದಕ್ಕೆ ಕೊಂಚ ಕಾಲಾವಕಾಶ ಬೇಕಾಗಿರುವುದರಿಂದ ತಾವುಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಇನ್ನೂ ಜಿಲ್ಲಾಧಿಕಾರಿಗಳ ಮನವಿ ಬಳಿಕ ಪ್ರತಿಭಟನೆಯನ್ನು ಹಿಂಪಡೆದ ದಲಿತರು ಮಾತನಾಡಿ, ನಾವು ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳ ಮನವಿಯಂತೆ ತಾತ್ಕಲಿಕವಾಗಿ ಈ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ. ಮುಂದಿನ 7 ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡುವುದಾಗಲೀ ಅಥವಾ ಇತರೆ ಯಾವುದಾದರೂ ಕಾರ್ಯಗಳನ್ನು ಕೈಗೊಳ್ಳದೇ ಇದ್ದರೇ ಮತ್ತೊಮ್ಮೆ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಂಘಟನೆಗಳ ಸಹಯೋಗದಲ್ಲಿ ಉಗ್ರ ರೀತಿಯ ಹೋರಾಟ ಕೈಗೊಳ್ಳಲಾಗುತ್ತದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ನಿವೇಶನ ಕಳೆದುಕೊಂಡವರಿಗೆ ನಿವೇಶನಗಳನ್ನು ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಭಾಸ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜಾನಂದರೆಡ್ಡಿ, ಡಿ.ವೈ.ಎಸ್.ಪಿ ಶಿವಕುಮಾರ್, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಮ. ಇಒ ನಾಗಮಣಿ, ಪಿಡಿಒ ನರಸಿಂಹಮೂರ್ತಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ದಲಿತ ಮುಖಂಡರಾದ ರಾಜಾಕಾಂತ್, ಸಿ.ಜಿ.ಗಂಗಪ್ಪ, ಜಿ.ವಿ.ಗಂಗಪ್ಪ, ಆರ್.ಕದಿರಪ್ಪ, ಆನಂದಪ್ಪ, ಇಸ್ಕೂಲಪ್ಪ, ರಮಣಪ್ಪ, ನಾರಾಯಣಪ್ಪ ಸೇರಿದಂತೆ ಹಲವರು ಹಾಜರಿದ್ದರು.