Loan App – ಇತ್ತೀಚಿಗೆ ಲೋನ್ ಆಪ್ ಗಳ ಸದ್ದು ಜೋರಾಗಿಯೇ ಇದೆ. ಲೋನ್ ಆಪ್ ಗಳ ಮೂಲಕ ಕಡಿಮೆ ಸಮಯದಲ್ಲೇ ಲೋನ್ ನೀಡುವುದಾಗಿ ಜನರನ್ನು ನಂಬಿಸುತ್ತವೆ. ಹಣ ಬೇಕಾಗಿರುವವರು ಕೆಲವೊಂದು ಆಪ್ ಗಳಲ್ಲಿ ಲೋನ್ ಪಡೆದುಕೊಂಡು ನಾನಾ ಸಂಕಷ್ಟಗಳಿಗೆ ತುತ್ತಾಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ಆ್ಯಪ್ ಮೂಲಕ ಲೋನ್ (Loan App) ಪಡೆದುಕೊಂಡ ವ್ಯಕ್ತಿಯ ಹೆಂಡತಿಯ ಪೊಟೋ ಮಾರ್ಫ್ ಮಾಡಿ ಪೊಟೋ ಹರಿಬಿಟ್ಟ ಕಾರಣ ಇದರಿಂದ ಮನನೊಂದ ಗಂಡ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ತ್ವರಿತ ಸಾಲ ನೀಡುವ ಆ್ಯಪ್ (Loan App) ಮೂಲಕ 2 ಸಾವಿರ ಸಾಲ ಪಡೆದಿದ್ದ ವ್ಯಕ್ತಿಯನ್ನು ನರೇಂದ್ರ (25) ಎಂದು ಗುರ್ತಿಸಲಾಗಿದ್ದು, ಆ್ಯಪ್ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೈದರಾಬಾದ ಮೂಲದ ನರೇಂದ್ರ ಕಳೆದ ಅಕ್ಟೋಬರ್ 28 ರಂದು ಅಖಿಲಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದು. ಮದುವೆಯಾದ ಬಳಿಕ ಈ ಜೋಡಿ ವಿಶಾಖಪಟ್ಟಣಂ ನಲ್ಲಿ ವಾಸ ಮಾಡುತ್ತಿದ್ದರು. ನರೇಂದ್ರ ಮೀನುಗಾರನಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಆತನಿಗೆ ಕೆಲವು ದಿನಗಳವರೆಗೆ ಆದಾಯವೇ ಇರಲಿಲ್ಲ. ಈ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಂತೆ. ಈ ಹಿನ್ನೆಲೆಯಲ್ಲಿ ಲೋನ್ ಆ್ಯಪ್ (Loan App) ಮೂಲಕ 2 ಸಾವಿರ ಲೋನ್ ಪಡೆದಿದ್ದಾನೆ. ಸಾಲ ಪಡೆದ ಕೆಲವೇ ದಿನಗಳಲ್ಲಿ ಲೋನ್ ಆ್ಯಪ್ ಏಜೆಂಟ್ ಗಳು ಸಾಲ ಮರುಪಾವತಿ ಮಾಡುವಂತೆ ಕಿರುಕುಳ, ಕೆಟ್ಟ ಸಂದೇಶಗಳನ್ನು ಕಳುಹಿಸೋದಕ್ಕೆ ಶುರು ಮಾಡಿದ್ದಾರಂತೆ.
ಇಷ್ಟಕ್ಕೆ ನಿಲ್ಲದ ಲೋನ್ ಆ್ಯಪ್ ಏಜೆಂಟ್ ಗಳು ಪತ್ನಿಯ ಮಾರ್ಫ್ ಮಾಡಿದ ಪೊಟೋಗಳನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಪತ್ನಿಯ ಚಿತ್ರದ ಮೇಲೆ ಬೆಲೆಯನ್ನು ಸಹ ಟೈಪ್ ಮಾಡಿ ನರೇಂದ್ರ ಕುಟುಂಬದ ಸದಸ್ಯರು, ಅವರ ಸ್ನೇಹಿತರಿಗೆ ಕಳುಹಿಸಿದ್ದಾರೆ. ಅದೇ ಪೊಟೋಗಳು ಅಖಿಲಾ ಪೋನ್ ಗೂ ಬಂದಿವೆ. ಕೂಡಲೇ ಆಕೆ ಗಂಡನಿಗೆ ತಿಳಿಸಿದ್ದಾಳೆ. ನಂತರ ದಂಪತಿ ಆ ಹಣ ಪಾವತಿ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಅವರಿಗೆ ಹಣ ಹೊಂದಿಸಲು ಆಗಿಲ್ಲ. ಲೋನ್ ಆ್ಯಪ್ ಏಜೆಂಟ್ ಗಳ ಕಿರುಕುಳ ಹೆಚ್ಚಾಯ್ತು. ಇದರಿಂದ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.