ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿಗೆ ಬಂದ ಮೇಲೆ ಕೆಲವರು ಭಾಷೆಯ ಸಮಸ್ಯೆಯ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಕನ್ನಡ ಕಲಿತು ಕನ್ನಡಿಗರಾಗಿಯೇ ಬೆರೆತು ಹೋಗುತ್ತಾರೆ. ಸದ್ಯ ದೆಹಲಿ ಮೂಲದ ಯುವತಿಯೊಬ್ಬರು ಕನ್ನಡ ಭಾಷೆಯ ಬಗ್ಗೆ ಮತ್ತು ಅದನ್ನು ಕಲಿಯುವುದರ ಮಹತ್ವದ ಬಗ್ಗೆ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ (Video) ಕನ್ನಡಿಗರ ಮನ ಗೆದ್ದಿದೆ.

ಹೌದು, ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಸಿಮ್ರಿಧಿ ಮಖಿಜಾ (Simridhi Makhija) ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರೀ ವೈರಲ್ (Viral Video) ಆಗಿದೆ.
Video – “ಕನ್ನಡ ಬರದಿದ್ದರೆ ಬೆಂಗಳೂರಿಗೆ ಬರಬೇಡಿ”
ಸಿಮ್ರಿಧಿ ಅವರು ತಮ್ಮ ವಿಡಿಯೋದಲ್ಲಿ ನೇರವಾಗಿಯೇ ಒಂದು ಮಾತನ್ನು ಹೇಳಿದ್ದಾರೆ. “ಒಂದು ವೇಳೆ ನಿಮಗೆ ಕನ್ನಡ ಬರುವುದಿಲ್ಲ ಎಂದಾದರೆ ದಯವಿಟ್ಟು ಬೆಂಗಳೂರಿಗೆ ಬರಬೇಡಿ. ನಾನು ದೆಹಲಿಯವಳು, ನನಗೂ ಮೊದಲು ಕನ್ನಡ ಕಲಿಯುವ ಅವಶ್ಯಕತೆ ಇಲ್ಲ ಎಂದೇ ಅನಿಸಿತ್ತು. ಆದರೆ ಕಳೆದ 60 ದಿನಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನನ್ನ ಅನುಭವದಲ್ಲಿ ಹೇಳುವುದಾದರೆ, ಪ್ರತಿಯೊಬ್ಬರೂ ಕನ್ನಡ ಕಲಿಯಲೇಬೇಕು. ಇದು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ” ಎಂದು ಕಿವಿಮಾತು ಹೇಳಿದ್ದಾರೆ.
Video – ದೋಸೆ ಹೋಟೆಲ್ ಮತ್ತು ಆಪ್ತತೆ!
ತಮ್ಮ ಮಾತಿಗೆ ಪೂರಕವಾಗಿ ಅವರು ಒಂದು ಸುಂದರವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. “ನಾನು ಎಚ್‌ಎಸ್‌ಆರ್ ಲೇಔಟ್‌ನಲ್ಲಿ (HSR Layout) ಇರುವ ಹೋಟೆಲ್ ಒಂದಕ್ಕೆ ದೋಸೆ ತಿನ್ನಲು ಹೋಗುತ್ತಿದ್ದೆ. ಅಲ್ಲಿನ ಅಣ್ಣ (ಹೋಟೆಲ್ ಸಿಬ್ಬಂದಿ) ನನ್ನನ್ನು ನೋಡಿ, ‘ಏನಮ್ಮ ನಾಲ್ಕು ದಿನ ಆಯ್ತು, ನೀವು ಬರಲೇ ಇಲ್ಲ, ಏನಾಯ್ತು?’ ಎಂದು ಕನ್ನಡದಲ್ಲೇ ಪ್ರೀತಿಯಿಂದ ಕೇಳಿದರು. ಅದಕ್ಕೆ ನಾನು ಕೆಲಸದ ಒತ್ತಡವಿತ್ತು ಎಂದು ಉತ್ತರಿಸಿದೆ. ಇಲ್ಲಿನ ಸ್ಥಳೀಯರು ತೋರುವ ಇಂತಹ ಆಪ್ತತೆ ಮತ್ತು ಆತಿಥ್ಯ ನಿಜಕ್ಕೂ ಅದ್ಭುತ” ಎಂದು ಸಿಮ್ರಿಧಿ ಸ್ಮರಿಸಿಕೊಂಡಿದ್ದಾರೆ. Read this also : ಡೆಲಿವರಿ ಕೆಲಸದ ನಡುವೆ ಮಗಳ ವಿದ್ಯಾಭ್ಯಾಸಕ್ಕೆ ಸಮಯ ಕೊಡುವ ‘ಅಲ್ಟಿಮೇಟ್ ಸ್ವಿಗ್ಗಿ ಡ್ಯಾಡ್’ಗೆ ಸಲಾಂ ಹೊಡೆದ ನೆಟ್ಟಿಗರು..!
Video – ಭಾಷೆ ಕಲಿಯುವುದು ಗೌರವದ ಸಂಕೇತ
“ನಾವು ಸ್ಥಳೀಯರೊಂದಿಗೆ ಬೆರೆಯಲು ಅವರ ಭಾಷೆಯಲ್ಲೇ ಮಾತನಾಡಿಸುವುದು ಉತ್ತಮ. ನನ್ನ ಸ್ನೇಹಿತರಲ್ಲಿ ಯಾರಿಗೆಲ್ಲ ಕನ್ನಡ ಮಾತನಾಡಲು ಬರುತ್ತದೆಯೋ, ಅವರ ಬಗ್ಗೆ ನನಗೆ ಅಸೂಯೆ ಇದೆ. ನಾನು ಕೂಡ ಅವರೊಂದಿಗೆ ಹೆಚ್ಚು ಸಮಯ ಕಳೆದು ಕನ್ನಡ ಕಲಿಯಲಿದ್ದೇನೆ. ಅನಗತ್ಯ ಭಾಷಾ ಚರ್ಚೆ ಅಥವಾ ಜಗಳಗಳಲ್ಲಿ ತೊಡಗುವ ಬದಲು, ಭಾಷೆ ಕಲಿಯುವುದು ಉತ್ತಮ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ನೆಟ್ಟಿಗರ ಮೆಚ್ಚುಗೆ
ಈ ವಿಡಿಯೋ ಈಗಾಗಲೇ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸಿಮ್ರಿಧಿ ಅವರ ಈ ಸ್ಪಷ್ಟ ಮತ್ತು ನೇರವಾದ ಮಾತಿಗೆ ಕನ್ನಡಿಗರು ಫಿದಾ ಆಗಿದ್ದಾರೆ. “ಸ್ಥಳೀಯ ಭಾಷೆಯನ್ನು ಕಲಿಯುವುದು ಅಲ್ಲಿನ ಸಂಸ್ಕೃತಿಗೆ ನಾವು ನೀಡುವ ಮೂಲಭೂತ ಗೌರವ, ನೀವು ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ” ಎಂದು ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಪರಭಾಷಿಕರು ಮನಸ್ಸು ಮಾಡಿದರೆ ಕನ್ನಡ ಕಲಿಯುವುದು ಕಷ್ಟವೇನಲ್ಲ, ಅದು ಪ್ರೀತಿಯನ್ನು ಗಳಿಸುವ ದಾರಿ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
