Protest – ಲೀಟರ್ ಹಾಲಿಗೆ ಕನಿಷ್ಟ ಬೆಲೆ 50 ರೂ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪಟ್ಟಣದ ಕೆಎಂಎಫ್ ಶಿಬಿರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕಿ ನವ್ಯಶ್ರೀ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಯರಾಮರೆಡ್ಡಿ ಮಾತನಾಡಿ, ಗುಡಿಬಂಡೆ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಜನರ ಆರ್ಥಿಕ ಪರಿಸ್ಥಿತಿ ತುಂಬಾ ಕ್ಲಿಷ್ಟಪರಿಸ್ಥಿತಿಯಲ್ಲಿದೆ. ರೈತರು ಹಾಗೂ ಕೃಷಿ ಕೂಲಿಕಾರರು ನಿಗಧಿತ ಆದಾಯ ಪಡೆಯುವ ಉದ್ದೇಶದಿಂದ ಹೈನುಗಾರಿಕೆಯತ್ತ ಮುಖಮಾಡಿದ್ದಾರೆ. ಜೊತೆಗೆ ಸಾಲ ಮಾಡಿ ಹಸುಗಳನ್ನು ಖರೀದಿ ಮಾಡಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಹೈನುಗಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹೈನುಗಾರರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸದೇ ಅವರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರದಿಂದ ನೀಡಬೇಕಾದ ಪ್ರೋತ್ಸಾಹ ಧನವನ್ನು ಸಹ ನೀಡದೇ ನಿರ್ಲಕ್ಷ್ಯ ವಹಿಸಿದೆ. ಜೊತೆಗೆ ಹೈನುಗಾರಿಕೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸುವಂತಹ ಹುನ್ನಾರಗಳೂ ಸಹ ನಡೆಯುತ್ತಿವೆ. ಆದ್ದರಿಂದ ಸರ್ಕಾರಗಳು ಕೂಡಲೇ ಹೈನುಗಾರರ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಮುಖಂಡ ಮುನಿಕೃಷ್ಣಪ್ಪ ಮಾತನಾಡಿ, ಹೈನುಗಾರರು ಪೂರೈಕೆ ಮಾಡುವಂತಹ ಲೀಟರ್ ಹಾಲಿಗೆ 31 ರೂಪಾಯಿ ನೀಡುತ್ತಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗುತ್ತಿದೆ. ಈ ದರವನ್ನು 50 ರೂಪಾಯಿಗಳಿಗೆ ಏರಿಕೆ ಮಾಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯಿಂದಲೂ ಹೈನುಗಾರರಿಗೆ ಸಮಸ್ಯೆಯಾಗಿದ್ದು, ಈ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಗೊಂದು ವಸತಿ ನಿಲಯ ಪ್ರಾರಂಭ ಮಾಡುವುದು ಹಾಗೂ ವಿದ್ಯಾರ್ಥಿ ವೇತನ ನೀಡವುದು, ಮರಣ ಹೊಂದಿದ ರಾಸುಗಳಿಗೆ ವಿಮೆ ಮಾಡಿಸಿರುವ ಫಲಾನುಭವಿಗಳಿಗೆ ಕೂಡಲೇ ಹಣ ನೀಡುವುದು, ಹೈನುಗಾರಿಕೆಯ ಯಂತ್ರೋಪಕರಣಗಳಿಗೆ ನಿಗಧಿಪಡಿಸಿರುವ ಜಿ.ಎಸ್.ಟಿ. ಕೂಡಲೇ ವಾಪಸ್ ಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದು, ಕೂಡಲೇ ನಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಈಡೇರಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಮುನಿಕೃಷ್ಣಪ್ಪ, ತಾಲೂಕು ಕಾರ್ಯದರ್ಶಿ ಆದಿನಾರಾಯಣಸ್ವಾಮಿ ವೆಂಕಟರಾಜು, ಜಯರಾಮರೆಡ್ಡಿ, ರಾಜಪ್ಪ, ಸೀನಪ್ಪ, ದೇವರಾಜು, ರಮಣ, ಸೋಮಶೇಖರ್ ರೆಡ್ಡಿ, ಗಂಗರಾಜು ಪುರುಷೋತ್ತಮ್, ನವೀನ್ ಕುಮಾರ್, ನರೇಂದ್ರ ಸೇರಿದಂತೆ ಹಲವರು ಇದ್ದರು.