Karnataka Rains – ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರೆದಿದ್ದು, ಹವಾಮಾನ ಇಲಾಖೆಯು ಮೇ 10ರಿಂದ ಒಂದು ವಾರದವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದ್ದರೆ, ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Karnataka Rains – ಯಾವ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್?
ಮೇ 10ರ ಶನಿವಾರದಿಂದ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಇದರೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯೂ ಇದೆ. ಇದಲ್ಲದೆ, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಇದೇ ರೀತಿಯ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಅಲರ್ಟ್ ನೀಡಿದೆ.
Karnataka Rains – ಉತ್ತರ ಕರ್ನಾಟಕದ ಪರಿಸ್ಥಿತಿ ಹೇಗಿದೆ?
ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಮುಂದುವರಿಯಲಿದೆ.
Read this also : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!
Karnataka Rains – ರಾಜ್ಯದಲ್ಲಿ ತಾಪಮಾನದ ಸ್ಥಿತಿ
ಕರಾವಳಿ ಕರ್ನಾಟಕದ ಕಾರವಾರ ಮತ್ತು ಪಣಂಬೂರು ಹಾಗೂ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಆದರೆ, ದಕ್ಷಿಣ ಒಳನಾಡಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಕೊಪ್ಪಳದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ. ಚಿಕ್ಕಮಗಳೂರು, ಧಾರವಾಡದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿದ್ದರೆ, ಕಲಬುರಗಿ, ಹಾವೇರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಚಿಂತಾಮಣಿ ಮತ್ತು ಶಿವಮೊಗ್ಗದಲ್ಲಿ ಸಾಮಾನ್ಯ ಗರಿಷ್ಠ ತಾಪಮಾನ ವರದಿಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ಕಲಬುರಗಿ, ಬೀದರ್ ಮತ್ತು ರಾಯಚೂರುಗಳಲ್ಲಿ ದಾಖಲಾಗಿದ್ದು, 38.4 ಡಿಗ್ರಿ ಸೆಲ್ಸಿಯಸ್ ತಲುಪಿದೆ.
Karnataka Rains – ಹವಾಮಾನ ಬದಲಾವಣೆಗೆ ಕಾರಣವೇನು?
ದಕ್ಷಿಣ ತೆಲಂಗಾಣದಿಂದ ಮನ್ನಾರ್ ಕೊಲ್ಲಿಯವರೆಗಿನ ಉತ್ತರ-ದಕ್ಷಿಣ ವಾಯುಭಾರ ಕುಸಿತವು ಪ್ರಸ್ತುತ ಕರ್ನಾಟಕದ ಉತ್ತರ ಒಳಭಾಗದಿಂದ ರಾಯಲಸೀಮ ಮತ್ತು ತಮಿಳುನಾಡಿನಾದ್ಯಂತ ಮನ್ನಾರ್ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದೆ. ಇದರ ಜೊತೆಗೆ, ಆಗ್ನೇಯ ಬಂಗಾಳಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಮೇಲ್ಭಾಗದ ವಾಯು ಚಂಡಮಾರುತದ ಪರಿಚಲನೆಯು ಮುಂದುವರೆದಿದ್ದು, ಇದು ರಾಜ್ಯದಲ್ಲಿ ಮಳೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.