Kannada Rajyostava – ಅನ್ಯ ರಾಜ್ಯಗಳಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬಂದು ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿತು, ಕನ್ನಡ ನಾಡಿನ ಪರಂಪರೆ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಅದರ ಜೊತೆಗೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಕಸಾಪ ನಿಕಟ ಪೂರ್ವ ಅಧ್ಯಕ್ಷ ಸುಬ್ಬರಾಯಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯು ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಕನ್ನಡದ ಏಕೀಕರಣಕ್ಕಾಗಿ ಅನೇಕ ಹೋರಾಟಗಳು ನಡೆದಿವೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಿಕಾ ಮಾಧ್ಯಮಗಳು ಭಾಷಭಿಮಾನ ಬೆಳಸುವಲ್ಲಿ ವಿಶೇಷ ಕೊಡುಗೆ ನೀಡಿವೆ. ನಾಡಿನ ಪ್ರತಿಯೊಬ್ಬರೂ ಸಹ ಕನ್ನಡ ಭಾಷಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಕನ್ನಡವನ್ನು ಮರೆತು ಅನ್ಯ ಭಾಷೆಗಳ ವ್ಯಾಮೋಹಕ್ಕೆ ಬಲಿಯಾಗಿ ನಮ್ಮ ಮಾತೃ ಭಾಷೆಯನ್ನು ಮಾತನಾಡುವುದನ್ನೇ ಮರೆಯುತ್ತಿದ್ದೇವೆ. ಜ್ಞಾನ ಸಂಪಾದನೆಗೆ ಯಾವ ಭಾಷೆಯನ್ನು ಬೇಕಾದರೂ ಬಳಸಿ, ಆದರೆ ನಮ್ಮ ನಡೆ-ನುಡಿ ಕನ್ನಡವಾಗಿರಲಿ, ನಮ್ಮ ನಾಡು, ನಮ್ಮ ಸಂಸ್ಕೃತಿ ಹಾಗೂ ಭಾಷೆಯ ಮೇಲಿರುವ ಪ್ರೀತಿ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ನಮ್ಮ ಗುಡಿಬಂಡೆಯ ಇತಿಹಾಸವನ್ನು ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಿರುವ ನಮ್ಮ ಸಾಧಕರನ್ನು ಸದಾ ನೆನಪಿನಲ್ಲಿಡೋಣ ಎಂದರು.
ಬಳಿಕ ಬಿಇಒ ಕೃಷ್ಣಪ್ಪ ಮಾತನಾಡಿ, ಈಗಾಗಲೇ ದೇಶ ವಿದೇಶಗಳಲಿ ಕನ್ನಡ ಭಾಷೆ ರಾರಾಜಿಸುತ್ತಿದೆ. ನವೆಂಬರ್ ತಿಂಗಳ ಪೂರ್ತಿ ರಾಜ್ಯದೆಲ್ಲೆಡೆ ರಾಜ್ಯೋತ್ಸವ ಸಂಭ್ರಮ ನಡೆಯುತ್ತಿದ್ದು, ರಾಜ್ಯಕ್ಕೆ ಬರುವ ವಲಸಿಗರಿಗೆ ಕನ್ನಡ ಭಾಷೆ ಕಲಿಸಬೇಕು. ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದ್ದರೂ ದೇಶದಲ್ಲಿ ನಾಡು ನುಡಿಯ ಹಬ್ಬ ಆಚರಿಸುವುವುದು ನಮ್ಮ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟ ಪೂರ್ವ ಅಧ್ಯಕ್ಷ ಸ.ನ. ನಾಗೇಂದ್ರ ಹಾಗೂ ಕಸಾಪ ಅಧ್ಯಕ್ಷ ಬಿ. ಮಂಜುನಾಥ್ ಮತ್ತು ವಾಹಿನಿ ಸುರೇಶ್ ಮಾತನಾಡಿದರು. ಇದೇ ವೇಳೆ ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವಕ್ಕೆ ಭಾಜನರಾದ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಬಿಇಒ ಕೃಷ್ಣಪ್ಪ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಕನ್ನಡಪರ ಸಂಘಟನೆಗಳ ಮುಖಂಡರುಗಳು, ಸದಸ್ಯರುಗಳು, ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.