ಬಾಗೇಪಲ್ಲಿ: ಗಡಿ ಪ್ರದೇಶದಲ್ಲಿದ್ದರೂ ಕನ್ನಡ ಭಾಷೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗದ ರೀತಿಯಲ್ಲಿ ಕನ್ನಡ ಭಾಷೆಯನ್ನು ಪ್ರೀತಿಸಿ, ಉಳಿಸಿ ಬೆಳಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ವೈ.ನಾರಾಯಣ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಸಿಎಕ್ಯೂ ಕೋಶ ಮತ್ತು ಕನ್ನಡ ವಿಭಾಗದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷೆವಹಿಸಿ ಮಾತನಾಡಿದ ಅವರು ಗಡಿ ಪ್ರದೇಶದಲ್ಲಿ ಭಾಷಾ ಸಂಘರ್ಷದ ಬದಲಿಗೆ ಸಾಮರಸ್ಯವನ್ನು ಕಾಪಾಡಿಕೊಂಡು ಬರುವುದರ ಮೂಲಕ ಕನ್ನಡತನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಹೆಮ್ಮೆಯವಿಚಾರ ಎಂದ ಅವರು ಈ ಭಾಗದಲ್ಲಿ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಕನ್ನಡ ಸಾಹಿತ್ಯ ಪರಿಸಷತ್ ತಾಲೂಕು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಕನ್ನಡಿಗರಿಗೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮಗಳನ್ನು ಹಾಗೂ ಹೋರಾಟಗಳನ್ನು ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿಸುವ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಶತಮಾನಗಳಿಂದ ಮಾಡಿಕೊಂಡು ಬರುತ್ತಿದೆ ಎಂದರು. ಕರ್ನಾಟಕದ ಸಮಗ್ರ ಏಳಿಗೆಯೇ ಪರಿಷತ್ತಿನ ಪ್ರಮುಖ ಗುರಿಯಾಗಿದೆ, ಕನ್ನಡ ಭಾಷೆ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಹಿತ್ಯದ ಅಧ್ಯಾಯನದದಲ್ಲಿ ತೊಡಗಿಸಿಕೊಳ್ಳಬೇಕಾದ ಹಾಗೂ ಕನ್ನಡ ಭಾಷೆ, ಸಾಹಿತ್ಯವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವ ನಾಡಿನ ಖ್ಯಾತ ಸಾಹಿತಿಗಳ ಹಾಗೂ ಕವಿಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಅಲ್ಲದೆ ಇಂತಹ ಮಹನೀಯರು ರಚಿಸಿರುವ ಸಾಹಿತ್ಯ, ಕನವಗಳನ್ನು ಓದುವ ಆಸಕ್ತಿಯನ್ನು ವಿದ್ಯಾರ್ಥಿ ಧೆಸೆಯಿಂದಲ್ಲೇ ಬೆಳಸಿಕೊಳ್ಳಬೇಕೆಂದ ಅವರು ಪಟ್ಯದ ಜೊತೆಗೆ ಭಾಷಾ ಜ್ಞಾನವನ್ನು ಉತ್ತಮಗೊಳಿಸುವಂತಹ ಕನ್ನಡ ಪುಸ್ತಕಗಳನ್ನ ಹಾಗೂ ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕೆಂದರು.

ಕಸಾಪ ಗೌರವ ಕಾರ್ಯದರ್ಶಿ ಶ್ರೀನಿವಾಸ ಬಾಣಾಲಪಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರವೀಣ್ ಕುಮಾರ್, ಅಭಿಷೇಕ್, ಗೋವರ್ಧನ್, ತ್ರಿನೀಶ್, ಶಾಪಿಯಾ ಭಾನು ರವರನ್ನು ಕಸಾಪವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಮುಖ್ಯಸ್ಥ ಡಾ.ಸಿ.ಎನ್.ವೆಂಕಟರಾಮರೆಡ್ಡಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೋ.ತಾಜ್ ಉನ್ನಿಸಾ, ಪ್ರಾಧ್ಯಾಪಕರಾದ ಡಾ.ಅನಿಲ್, ಡಾನಾಗರಾಜ್, ಡಾ.ಮನೋಜ್, ಪ್ರೊ.ಗಂಗಾಧರಪ್ಪ, ಶ್ರೀನಿವಾಸ್, ಓಬಳರೆಡ್ಡಿ ಮತ್ತಿತರರು ಇದ್ದರು.