ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಪ್ರತಿಭೆ ಬಲಿಯಾಗಿದ್ದಾರೆ. ಮೇರಿಲ್ಯಾಂಡ್‌ನಲ್ಲಿ ನೆಲೆಸಿದ್ದ ತೆಲುಗು ಮೂಲದ ಯುವತಿ ನಿಖಿತಾ ರಾವ್ ಎಂಬುವವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದ್ದು, ಈ ಘಟನೆ ಇಡೀ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಈ ಕೊಲೆ ಪ್ರಕರಣದಲ್ಲಿ ಅರ್ಜುನ್ ಶರ್ಮಾ (Indian woman) ಎಂಬಾತನ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Indian woman – ಏನಿದು ಘಟನೆ? ಅಂದು ನಡೆದಿದ್ದೇನು?
ಮೇರಿಲ್ಯಾಂಡ್ ಪೊಲೀಸರ ವರದಿಯ ಪ್ರಕಾರ, ಡಿಸೆಂಬರ್ 31ರ ಸಂಜೆ ಸುಮಾರು 7 ಗಂಟೆಗೆ ನಿಖಿತಾ ರಾವ್ ಅವರನ್ನು ಅರ್ಜುನ್ ಶರ್ಮಾ ಹತ್ಯೆ ಮಾಡಿದ್ದಾನೆ. ಆದರೆ, ಹಂತಕ ಎಷ್ಟು ಚಾಣಾಕ್ಷನಾಗಿದ್ದ ಎಂದರೆ, ಕೊಲೆ ಮಾಡಿದ ಎರಡು ದಿನಗಳ ನಂತರ ಅಂದರೆ ಜನವರಿ 2ರಂದು ತಾನೇ ಪೊಲೀಸರಿಗೆ ದೂರು ನೀಡಿದ್ದ. “ನಿಖಿತಾ ಡಿಸೆಂಬರ್ 31ರಿಂದ ಕಾಣೆಯಾಗಿದ್ದಾಳೆ, ಅಂದು ಸಂಜೆ ಅವಳು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹೋದವಳು ಮರಳಿ ಬರಲೇ ಇಲ್ಲ” ಎಂದು ಸುಳ್ಳು ಕಥೆ ಕಟ್ಟಿದ್ದ.
ಆದರೆ, ದೂರು ನೀಡಿದ ದಿನವೇ ಅರ್ಜುನ್ ರಹಸ್ಯವಾಗಿ ಭಾರತಕ್ಕೆ ವಿಮಾನವೇರಿದ್ದ. ಪೊಲೀಸರು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಸಿಗಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಜನವರಿ 3ರಂದು ಆತನ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದಾಗ, ಅಲ್ಲಿ ರಕ್ತದ ಮಡುವಿನಲ್ಲಿ ನಿಖಿತಾ (Indian woman) ಹೆಣವಾಗಿ ಬಿದ್ದಿರುವುದು ಪತ್ತೆಯಾಗಿದೆ. ನಿಖಿತಾ ದೇಹದ ಮೇಲೆ ಹಲವು ಕಡೆ ಚಾಕು ಇರಿತದ ಗುರುತುಗಳಿದ್ದವು.
ಹಣದಾಸೆಯೇ ಕೊಲೆಗೆ ಕಾರಣವಾಯಿತೇ?
ಪೊಲೀಸರ ತನಿಖೆಯಲ್ಲಿ ಒಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಡಿಸೆಂಬರ್ 31ರಂದು ನಿಖಿತಾ ಸಾವನ್ನಪ್ಪಿದ್ದರೆ, ಜನವರಿ 1ರಂದು ಆಕೆಯ ಬ್ಯಾಂಕ್ ಖಾತೆಯಿಂದ ಅರ್ಜುನ್ ಖಾತೆಗೆ ಭಾರಿ ಮೊತ್ತದ ಹಣ ವರ್ಗಾವಣೆಯಾಗಿದೆ. ಮೊದಲು 3,000 ಡಾಲರ್, ನಂತರ 395 ಡಾಲರ್ ಹೀಗೆ ಒಟ್ಟು ಸುಮಾರು 4,000 ಡಾಲರ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು 3.5 ಲಕ್ಷ) ಹಣವನ್ನು ಆತ ವರ್ಗಾಯಿಸಿಕೊಂಡಿದ್ದಾನೆ. ಹಣಕ್ಕಾಗಿ ಈ ಕೊಲೆ ನಡೆದಿದೆಯೇ ಎಂಬ ಅನುಮಾನಕ್ಕೆ ಇದು ಪುಷ್ಟಿ ನೀಡಿದೆ.
ಸಾಧಕಿಯ ಬದುಕು ಅರ್ಧಕ್ಕೇ ಅಂತ್ಯ
ಕೊಲೆಯಾದ ನಿಖಿತಾ ರಾವ್ ಒಬ್ಬ ಅದ್ಭುತ ಪ್ರತಿಭಾವಂತೆಯಾಗಿದ್ದರು. ಶಿಕ್ಷಣದಲ್ಲಿ ಟಾಪರ್ ಆಗಿದ್ದ ಇವರು, ಅಮೆರಿಕಕ್ಕೆ ಹೋಗುವ ಮುನ್ನ ಸಿಕಂದರಾಬಾದ್‌ನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಕ್ಲಿನಿಕಲ್ ಫಾರ್ಮಸಿಸ್ಟ್ ಆಗಿ ಕೆಲಸ ಮಾಡಿದ್ದರು. ನಂತರ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಮುಗಿಸಿ, ಎಲಿಕಾಟ್ ಸಿಟಿಯ ಫಾರ್ಮಾ ಕಂಪನಿಯೊಂದರಲ್ಲಿ ‘ಡೇಟಾ ಅಂಡ್ ಸ್ಟ್ರಾಟಜಿ ಅನಲಿಸ್ಟ್’ ಆಗಿ ಕೆಲಸಕ್ಕೆ ಸೇರಿದ್ದರು. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಅವರಿಗೆ ಕಂಪನಿಯು ‘ಆಲ್ ಇನ್’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂತಹ ಪ್ರತಿಭಾನ್ವಿತೆ ಇಂದು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. Read this also : 6 ವರ್ಷದ ಕಂದಮ್ಮನ ಮೇಲೆ ಸಾಮೂಹಿಕ ಅತ್ಯಾ***ಚಾರ, ಹತ್ಯೆ ಮಾಡಿ 3ನೇ ಮಹಡಿಯಿಂದ ಎಸೆದ ಪಾಪಿಗಳು!

ಹಂತಕನಿಗಾಗಿ ಹುಡುಕಾಟ ಚುರುಕು
ಆರೋಪಿ ಅರ್ಜುನ್ ಶರ್ಮಾ ಪಾಸ್‌ಪೋರ್ಟ್ ಪ್ರಕಾರ ಆತ ಚೆನ್ನೈ ನಿವಾಸಿಯಾಗಿದ್ದಾನೆ. ಸದ್ಯ ಮೇರಿಲ್ಯಾಂಡ್ ಪೊಲೀಸರು ಆತನ ವಿರುದ್ಧ ಫಸ್ಟ್ ಮತ್ತು ಸೆಕೆಂಡ್ ಡಿಗ್ರಿ ಮರ್ಡರ್ ಕೇಸ್ ದಾಖಲಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ನಿಖಿತಾ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಇಂಟರ್‌ಪೋಲ್ ಸಹಾಯದೊಂದಿಗೆ ಮತ್ತು ಎರಡು ದೇಶಗಳ ನಡುವಿನ ಒಪ್ಪಂದಗಳನ್ನು ಬಳಸಿ, ಭಾರತಕ್ಕೆ ಪರಾರಿಯಾಗಿರುವ ಅರ್ಜುನ್ ಶರ್ಮಾನನ್ನು ಅಮೆರಿಕಕ್ಕೆ (Indian woman) ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾದರೆ, ಡಿಸೆಂಬರ್ 31ರ ರಾತ್ರಿ ಆ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದಾದರೂ ಏನು? ಕೇವಲ ಹಣಕ್ಕಾಗಿ ಈ ಕೊಲೆ ನಡೆದಿದೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬುದು ಹಂತಕ ಸಿಕ್ಕಿಬಿದ್ದ ಮೇಲಷ್ಟೇ ತಿಳಿಯಬೇಕಿದೆ.
