ಹಿಂದಿನ ಕಾಲದಲ್ಲಿ ಜಮೀನುದಾರರು ಸಾಲ ಕೊಟ್ಟು, ಸಾಲ ಪಡೆದವರು ಸಾಲ ತೀರಿಸದೇ ಇದ್ದ ಪಕ್ಷದಲ್ಲಿ ಅವರ ಮನೆಯಲ್ಲಿದ್ದವರು ಜಮೀನುದಾರರ ಮನೆಯಲ್ಲಿ ಜೀತಕ್ಕೆ ಇಟ್ಟುಕೊಳ್ಳುತ್ತಿದ್ದಂತಹ ವಿಚಾರಗಳನ್ನು ತಿಳಿದಿರುತ್ತೇವೆ. ಹುಡುಗರು, ಹುಡುಗಿಯರು ಹೀಗೆ ಮಕ್ಕಳನ್ನು ಸಹ ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಕಾಲದಲ್ಲೂ ಸಹ ಅಂತಹುದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆದರೆ ಇಲ್ಲಿ ಖಾಸಗಿ ಬ್ಯಾಂಕ್ ಸಾಲ ಪಡೆದವನ ಹೆಂಡತಿಯನ್ನು ಒತ್ತೆಯಾಗಿ ಇರಿಸಿಕೊಂಡ ಘಟನೆ ನಡೆದಿದೆ.
ಈಗಾಗಲೇ ಸಂಜೆ 6 ಗಂಟೆಯ ಬಳಿಕ ಸಾಲದ ಹಣ ಮರುಪಾವತಿ ಮಾಡುವಂತೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳಿವೆ. ಆದರೆ ತಮಿಳುನಾಡಿದ ಸೇಲಂ ಜಿಲ್ಲೆಯ ವಳಪ್ಪಾಡಿಯಲ್ಲಿರುವ IDFC ಬ್ಯಾಂಕ್ ನಲ್ಲಿ ಸಾಲ ಮಾಡಿದ್ದ ಪತಿ ಸಾಲದ ಕಂತನ್ನು ಕಟ್ಟಿಲ್ಲ ಎಂದು ಆತನ ಪತ್ನಿಯನ್ನು ಒತ್ತೆಯಾಗಿ ಇಟ್ಟುಕೊಂಡ ಆಘಾತಕಾರಿ ಘಟನೆ ನಡೆದಿದೆ. ಪ್ರಶಾಂತ್ ಎಂಬ ವ್ಯಕ್ತಿ 35 ಸಾವಿರ ವೈಯುಕ್ತಿಕ ಸಾಲ ಪಡೆದಿದ್ದರು. ಆತನ ಸಾಲ ಕಂತು ಕಟ್ಟು ಇನ್ನೂ 10 ವಾರಗಳ ಸಮಯವಿತ್ತು ಎನ್ನಲಾಗಿದೆ. ಆದರೆ ಏ.30 ರಂದು ಆತನ ಮನೆಗೆ ಬ್ಯಾಂಕ್ ನ ಮಹಿಳಾ ಸಿಬ್ಬಂದಿ ಶುಭಾ ಎಂಬಾಕೆ ಪ್ರಶಾಂತ್ ಪತ್ನಿ ಗೌರಿಶಂಕರಿ ಎಂಬುವವರನನ್ನು ಕುಂಟುನೆಪ ಹೇಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪ್ರಶಾಂತ್ ಸಾಲದ ಕಂತು ಜಮೆ ಮಾಡುವವರೆಗೂ ಬಿಡುವುದಿಲ್ಲ ಎಂದು ಗೌರಿಶಂಕರಿಯನ್ನು ಒತ್ತೆಯಿಟ್ಟುಕೊಂಡಿದ್ದಾರೆ.
ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಪ್ರಶಾಂತ್ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಬಳಿಕ ಸಾಲದ ಕಂತಿನ ಹಣ ಹೊಂದಿಸಿಕೊಂಡು ರಾತ್ರಿ 7.30 ರ ಸಮಯದಲ್ಲಿ ಹೆಂಡತಿಯನ್ನು ಬಿಡಿಸಿಕೊಂಡು ಹೋಗಿದ್ದಾನೆ. ಇನ್ನೇನು ಆತ ಕೋಟಿಯಾಗಲಿ, ಲಕ್ಷ ಆಗಲಿ, ಸಾವಿರಗಳಾಗಲಿ ಸಾಲದ ಕಂತು ಬಾಕಿ ಉಳಿಸಿಕೊಂಡಿರಲಿಲ್ಲ. ವಾರದ ಕಂತಿನ ಹಣವಾದ 770 ರೂಪಾಯಿಗಾಗಿ IDFC ಬ್ಯಾಂಕ್ ನವರು ಪ್ರಶಾಂತ್ ಪತ್ನಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ. ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ನ ಕ್ರಮದ ಬಗ್ಗೆ ವ್ಯಾಪಕ ಆಕ್ರೋಷ ವ್ಯಕ್ತವಾಗುತ್ತಿದೆ. ಕೂಡಲೇ ಬ್ಯಾಂಕ್ ವಿರುದ್ದ ಕ್ರಮ ವಹಿಸಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ.