ಪ್ರೀತಿ ಮಾಡೋದು ತಪ್ಪಾ? ಪ್ರೀತಿಸಿದವರನ್ನು ಮದುವೆ ಆಗಬೇಕು ಅಂದುಕೊಳ್ಳೋದು ಅಪರಾಧವಾ? ಹೈದರಾಬಾದ್ ನ (Hyderabad) ಪಟಾನ್‌ಚೆರು ಪ್ರದೇಶದಲ್ಲಿ ನಡೆದ ಘಟನೆಯೊಂದು ಎಂಥವರ ಎದೆಯನ್ನೂ ನಡುಗಿಸುವಂತಿದೆ. ಮಗಳನ್ನು ಪ್ರೀತಿಸಿದ ಪಾಪಕ್ಕೆ, “ಬಾಪ್ಪಾ.. ಮದುವೆ ಮಾಡಿಕೊಡ್ತೀವಿ” ಎಂದು ನಂಬಿಸಿ ಕರೆಸಿಕೊಂಡು, ಯುವಕನ ಪ್ರಾಣವನ್ನೇ ತೆಗೆದ ಭೀಕರ ಘಟನೆ ಬೆಳಕಿಗೆ ಬಂದಿದೆ.

Hyderabad – ಅಸಲಿಗೆ ನಡೆದಿದ್ದೇನು?
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ ದುರ್ದೈವಿ ಶ್ರಾವಣ್ ಸಾಯಿ ಬಿ.ಟೆಕ್ (B.Tech) ಓದುತ್ತಿದ್ದ ವಿದ್ಯಾರ್ಥಿ. ಅದೇ ಏರಿಯಾದ ಯುವತಿಯೊಬ್ಬಳನ್ನು ಕಳೆದ ಒಂದು ವರ್ಷದಿಂದ ಗಾಢವಾಗಿ ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿ ಮದುವೆಯ ಹಂತಕ್ಕೂ ತಲುಪಿತ್ತು. ಇನ್ನೇನು ಮನೆಯವರ ಒಪ್ಪಿಗೆ ಪಡೆದು ಒಂದಾಗಬೇಕು ಎಂದುಕೊಂಡಿದ್ದರು. ಆದರೆ, ಈ ವಿಷಯ ಯುವತಿಯ ಮನೆಯವರಿಗೆ ತಿಳಿದಾಗ ಕಥೆ ಬದಲಾಗಿದೆ.
Hyderabad – ಮಾತುಕತೆ ನೆಪದಲ್ಲಿ ನಡೆಯಿತಾ ಸಂಚು?
ಪ್ರೀತಿ ವಿಷಯ ಗೊತ್ತಾದ ಕೂಡಲೇ ಯುವತಿಯ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಧೈರ್ಯ ಮಾಡಿ ಶ್ರಾವಣ್ ಸಾಯಿ, ಯುವತಿಯ ಮನೆಗೆ ಮದುವೆ ವಿಷಯ ಮಾತನಾಡಲು ಹೋಗಿದ್ದಾನೆ (ಮತ್ತೊಂದು ಮಾಹಿತಿಯ ಪ್ರಕಾರ, ಮಾತುಕತೆಗಂತಲೇ ಇವರು ಕರೆಸಿಕೊಂಡಿದ್ದರು ಎನ್ನಲಾಗಿದೆ). ಅಲ್ಲಿ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ.
Read this also : ಲಕ್ನೋದಲ್ಲಿ ಘೋರ ಕೃತ್ಯ: ಲಿವ್-ಇನ್ ಪಾರ್ಟನರ್ ಕತೆ ಮುಗಿಸಿ ಶವದ ಜೊತೆಗೇ ರಾತ್ರಿ ಕಳೆದ ಅಮ್ಮ-ಮಕ್ಕಳು!
ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ – ಪ್ರಾಣಬಿಟ್ಟ ಪ್ರೇಮಿ
ಮಾತುಕತೆ ವಿಕೋಪಕ್ಕೆ ಹೋದಾಗ, ಯುವತಿಯ ಕಡೆಯವರು ತಾಳ್ಮೆ ಕಳೆದುಕೊಂಡಿದ್ದಾರೆ. ಈ ಗಲಾಟೆಯಲ್ಲಿ ಯುವತಿಯ ಕುಟುಂಬದ ಸದಸ್ಯನೊಬ್ಬ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್‌ನಿಂದ ಶ್ರಾವಣ್ ಸಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶ್ರಾವಣ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಗಾಬರಿಯಾದ ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲೇ ಅವನು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ಪೊಲೀಸರ ಎಂಟ್ರಿ – ಆರೋಪಿಗಳಿಗೆ ಶೋಧ
ವಿಷಯ ತಿಳಿದ ತಕ್ಷಣ ಪಟಾನ್‌ಚೆರು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಶ್ರಾವಣ್ ಕುಟುಂಬದವರ ರೋಧನ ಮುಗಿಲು ಮುಟ್ಟಿದೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
