Hindu temple – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ. ಸಾವಿರಾರು ಸಂಖ್ಯೆಯ ಭಕ್ತರ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಬ್ರಹ್ಮರಥೋತ್ಸವ ನೆರವೇರಿತು.

ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಕೂರ್ಮಗಿರಿಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಫೆ.10 ರಿಂದ ಪ್ರಾರಂಭಗೊಂಡಿದ್ದು, ಫೆ.23 ರಂದು ಕೊನೆಯಾಗಲಿದೆ. ಪ್ರತಿ ವರ್ಷದಂತೆ ಖರನಾಮ ಸಂವತ್ಸರದ ಮಾಘ ಶುದ್ದ ಚತುರ್ದಶಿಯ 3 ನೇ ಬಾನುವಾರ ಬ್ರಹ್ಮರಥೋತ್ಸವ ನಡೆಯುತ್ತದೆ. ಅದರಂತೆ ಫೆ.16 ರಂದು ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ನೆರವೇರಿದೆ. ಇನ್ನೂ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಹ ಸಲ್ಲಿಸಲಾಯಿತು. ಈ ಜಾತ್ರಾ ಮಹೋತ್ಸವಕ್ಕೆ ಕೇವಲ ಗುಡಿಬಂಡೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿದ್ದರು. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಈ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮುಜರಾಯಿ ಇಲಾಖೆ ವತಿಯಿಂದ ಆಚರಿಸಲಾಗಿದೆ. ಈ ಧಾರ್ಮಿಕ ಕೈಂಕರ್ಯದಲ್ಲಿ ನೆರೆಯ ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಧರ್ಮವರಂ, ಕದಿರಿ, ಲೇಪಾಕ್ಷಿ ಸೇರಿದಂತೆ ಅನೇಕ ಹೊರರಾಜ್ಯಗಳಿಂದ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಈ ಬ್ರಹ್ಮರಥೋತ್ಸವದಲ್ಲಿ ಭಕ್ತರು ಗೋವಿಂದಾ ಗೋವಿಂದಾ ಜಯಘೋಷಣೆಗಳನ್ನು ಕೂಗುತ್ತಾ, ದೇವರ ಜಪ ಮಾಡುತ್ತಾ ರಥವನ್ನು ಎಳೆದು ರಥದ ಮೇಲೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಂಡರು.
ಈಗಾಗಲೇ ದೇವಾಲಯದ ವಾರ್ಷಿಕ ಆದಾಯ 25 ಲಕ್ಷದಷ್ಟು ಬರುತ್ತಿದೆ. ಎ ದರ್ಜೆಯ ದೇವಾಲಯದ ವ್ಯಾಪ್ತಿಗೆ ಎಲ್ಲೋಡು ಆದಿನಾರಾಯಣಸ್ವಾಮಿ ದೇವಾಲಯವನ್ನು ಉನ್ನತೀಕರಿಸುವುದು. ಪ್ರತಿನಿತ್ಯ ಇಲ್ಲಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ಸರ್ಕಾರ ಸಹಕಾರ ನೀಡುವುದು ಸೇರಿದಂತೆ ನೀರು, ಶೌಚಾಲಯಗಳು ಮೊದಲಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಜರಾಯಿ ಇಲಾಖೆ ಮುಂದಾಗಬೇಕು ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್ ಇದೇ ಸಮಯದಲ್ಲಿ ಮನವಿ ಮಾಡಿದರು.

ಇನ್ನೂ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ದೇವಾಲಯದ ವ್ಯಾಪ್ತಿಯಲ್ಲಿ ಹಲವು ಕಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳು ಗುಡಿಬಂಡೆ ಪೊಲೀಸರು ಹೊರ ಠಾಣೆ ತೆರೆದು ಕಳ್ಳತನ, ಗಲಭೆ, ಜೂಜು ಮತ್ತಿತರ ಘಟನೆಗಳು ನಡೆಯದಂತೆ ಈ ಭಾರಿ ಬಿಗಿ ಬಂದೋಬಸ್ತ್‍ನ್ನು ಪೊಲೀಸ್ ಇಲಾಖೆ ವಹಿಸಿಕೊಂಡಿತ್ತು.