ಡಿ.12 ರಿಂದ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಕಡ್ಡಾಯವಾಗಿದ್ದು, ನಿಯಮ ತಪ್ಪಿದರೇ ದಂಡ ವಿಧಿಸಲಾಗುತ್ತದೆ. ತಮ್ಮ ಪ್ರಾಣ ಉಳಿಸುವ ನಿಟ್ಟಿನಲ್ಲಿ ಈ ನಿಯಮ ತಂದಿದ್ದು, ಸವಾರರು ಸಂಚಾರಿ ನಿಯಮ ಪಾಲನೆ ಮಾಡಬೇಕು ಎಂದು ಗುಡಿಬಂಡೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್ ತಿಳಿಸಿದರು.

Helmet Awareness – ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಬೈಕ್ ಚಲಾಯಿಸಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯ ಎಂಬ ಕಾನೂನು ಜಾರಿಯಾಗಿದೆ. ನಾವೂ ಸಹ ಈಗಾಗಲೇ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲು ಹಾಗೂ ವಾಹನ ಸವಾರರ ಪ್ರಾಣ ಉಳಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಡಿ.12 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಎಲ್ಲರೂ ಕಡ್ಡಾಯವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು. ಒಂದು ವೇಳೆ ಹೆಲ್ಮೆಟ್ ಇಲ್ಲದೇ ಸಂಚರಿಸಿದರೇ ಕಾನೂನಿನಂತೆ ಹಂತ ಹಂತವಾಗಿ ದಂಡವನ್ನು ವಿಧಿಸಲಾಗುತ್ತದೆ, ಜೊತೆಗೆ ಕಾನೂನಿನಂತೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
Helmet Awareness – ಪೆಟ್ರೋಲ್ ಬಂಕ್ ಮಾಲೀಕರ ಸಹಕಾರ ಅಗತ್ಯ
ಇನ್ನೂ ಗುಡಿಬಂಡೆ ವ್ಯಾಪ್ತಿಯ ಪೆಟ್ರೋಲ್ ಬಂಕ್ ಗಳಿಗೆ ತೆರಳಿ ಅಲ್ಲೂ ಹೆಲ್ಮೆಟ್ ಕಡ್ಡಾಯ ನಿಯಮದ ಕುರಿತು ಜಾಗೃತಿ ಮೂಡಿಸಲಾಯಿತು. ವಾಹನ ಸವಾರರ ಪ್ರಾಣ ಉಳಿಸುವ ಉದ್ದೇಶದಿಂದ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದ್ದು, ಇದಕ್ಕೆ ಪೆಟ್ರೋಲ್ ಬಂಕ್ ಮಾಲೀಕರೂ ಸಹ ಸಹಕರಿಸಬೇಕು. ಹೆಲ್ಮೆಟ್ ಇಲ್ಲದೇ ಬರುವಂತಹ ದ್ವಿಚಕ್ರ ವಾಹನಗಳಿಗೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬಾರದು. ಪೆಟ್ರೋಲ್ ಬಂಕ್ ಮಾಲೀಕರೂ ಸಹ ಪೊಲೀಸರೊಂದಿಗೆ ಕೈ ಜೋಡಿಸಿದರೇ ಈ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು ಎಂದರು.

ಅಪರಾಧಗಳ ಬಗ್ಗೆ ಮಾಹಿತಿ ನೀಡಿ
ಇದೇ ಸಮಯದಲ್ಲಿ ಸಾರ್ವಜನಿಕರಿಗೆ ಸಂಚಾರಿ ನಿಯಮ ಹಾಗೂ ಅಪರಾಧಗಳ ಕುರಿತು ಮಾಹಿತಿ ನೀಡಲಾಯಿತು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನಲ್ಲಿ ಏನಾದರೂ ಅಪರಾಧಿಕ ಚಟುವಟಿಕೆಗಳು ನಡೆದರೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕಾರ ನೀಡಿದಾಗ ಅಪರಾಧವನ್ನು ತಡೆಗಟ್ಟಬಹುದು ಎಂದು ಹೇಳಿದ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಅಪಹರಣ, ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ, ವರದಕ್ಷಿಣೆ ನಿಷೇಧ ಕಾಯ್ದೆ, ಮಾದಕ ವಸ್ತುಗಳ ಬಳಕೆ ನಿಷೇದದ ಕುರಿತು ಅರಿವು ಮೂಡಿಸಲಾಯಿತು. ಈ ಸಮಯದಲ್ಲಿ ಪಪಂ ಸದಸ್ಯ ಬಷೀರ್, ಪೊಲೀಸ್ ಪೇದೆಗಳಾದ ದೇವರಾಜು, ಪದ್ಮಮ್ಮ ಸೇರಿದಂತೆ ಹಲವರು ಇದ್ದರು.
