ನಾಡಪ್ರಭು ಕೇಂಪೇಗೌಡ ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ಕೈಬಿಟ್ಟಿದ್ದು, ಈ ಕುರಿತು ಹೆಚ್.ಡಿ.ಕೆ. ರಿಯಾಕ್ಟ್ ಆಗಿದ್ದಾರೆ. ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ, ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರಮದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ದೂರುವುದೂ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ. ಅವರು ಕನ್ನಡದ ಸ್ವತ್ತು. ನಾಳೆಯ ಸರ್ಕಾರ ಕಾರ್ಯಕ್ರಮದಲ್ಲಿ ದೇವೇಗೌಡರು, ನನ್ನ ಹೆಸರು ಹಾಕಿಲ್ಲ ಎಂದು ಹೇಳಿದ್ದರು. ನಾನು ಈ ವಿಚಾರಕ್ಕೆ ಅಷ್ಟೊಂದು ಮಹತ್ವ ಕೊಡೊಲ್ಲ. ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರಮದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ಹೇಳೋದು ಇಲ್ಲ. ಕೆಂಪೇಗೌಡರ ಜಯಂತಿಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಸರ್ಕಾರ ಒಂದು ರೀತಿಯಲ್ಲಿ ಮಾಡಿದರೇ, ದೇವನಹಳ್ಳಿಯ ಭಾಗದಲ್ಲಿ ಅನೇಕರು ಮನೆ ಮನೆಯಲ್ಲೂ ಕೆಂಪೇಗೌಡರ ಪೊಟೋ ಇಟ್ಟು ಪೂಜೆ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಕೆಂಪೇಗೌಡರಿಂದ ಬೆಂಗಳೂರು ಇಡೀ ವಿಶ್ವದಾದ್ಯಂತ ಖ್ಯಾತಿ ಪಡೆದುಕೊಂಡಿದೆ ಎಂದರು.
ಇನ್ನೂ ಕೆಂಪೇಗೌಡರವರು ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಈಗಿನ ದಿನಗಳಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕೆರೆಗಳನ್ನೇ ನುಂಗಿದ್ದಾರೆ. ಈಗಲಾದರೂ ಇರುವ ಕೆರೆಗಳನ್ನಾದರೂ ಕಾಪಾಡುವ ಕೆಲಸ ಮಾಡಬೇಕು. ಈಗಲೇ ಕುಡಿಯೋಕೆ ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಮುಂದಿನ 15 ವರ್ಷ ಆದ ಮೇಲೆ ಏನಾಗುತ್ತೋ ಗೊತ್ತಿಲ್ಲ. ಸರ್ಕಾರ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡೋದಾದರೇ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಲಿ. ಈ ಕೆಲಸ ಮಾಡಿದರೇ ನಾನು ಸೆಲ್ಯೂಟ್ ಮಾಡುತ್ತೇನೆ. ಇನ್ನೂ ನಾನು ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕು ಅದನ್ನು ಮಾಡುತ್ತೇನೆ. ನಾಳೆ ರಾಷ್ಟ್ರಪತಿಗಳ ಜಂಟಿ ಭಾಷಣ ಇರುವ ಕಾರಣ ನಾನು ಇಲ್ಲಿಯೇ ಇರಬೇಕು, ಈ ಕಾರಣದಿಂದ ನನ್ನು ಹೆಸರು ಹಾಕಿದರೂ ನಾನು ಹೋಗೋಕೆ ಆಗೋಲ್ಲ. ನಾನು ಇಲ್ಲಿಂದಲೇ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.