ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕಾಂಗ್ರೇಸ್ ನಡುವೆ ಪ್ರತಿನಿತ್ಯ ವಾಕ್ಸಮರ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೆ ಮಾಜಿ ಪಿಎಂ ಹೆಚ್.ಡಿ.ದೇವೆಗೌಡ ರವರು ಪ್ರಜ್ವಲ್ ಎಲ್ಲಿದ್ದರೂ ಬೇಗ ಬರುವಂತೆ ಎಚ್ಚರಿಕೆಯ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರಜ್ವಲ್ ನನ್ನು ಬೇರೆ ದೇಶಕ್ಕೆ ಹೋಗಲು ಬಿಟ್ಟು ಈಗ ಪತ್ರ ಬರೆದರೇ ಏನು ಪ್ರಯೋಜನ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದು ಹೋಗಿದ್ದರೇ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣವನ್ನು ಜೀವಂತವಾಗಿ ಇಡಬೇಕು ಅನ್ನೋದು ಹೊರತುಪಡಿಸಿ, ಪ್ರಕರಣದಲ್ಲಿನ ಸತ್ಯಾಂಶ ಹಾಗೂ ವಾಸ್ತವಾಂಶ ಹೊರಗೆ ತರಬೇಕು ಎನ್ನುವುದು ಇವರು ಯಾರಿಗೂ ಇಲ್ಲ. ದೇವೇಗೌಡರ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಇದೀಗ ನಾನು ಒಂದು ಪ್ರಶ್ನೆ ಕೇಳುತ್ತೇನೆ, ನಿಮ್ಮ ಮಗ ವಿದೇಶಕ್ಕೆ ಹೋಗೊವಾಗ ನಿಮ್ಮ ಅನುಮತಿ ಪಡೆದಿದ್ದರೇ? ಇವರ ಮಗನ ಜೊತೆಗೆ ಯಾರು ಯಾರು, ಎಷ್ಟು ಮಂದಿ ಹೋಗಿದ್ದರು, ಅಲ್ಲಿ ನಡೆದ ಘಟನೆ ಏನು ಎಂದು ಏಕೆ ತನಿಖೆ ಮಾಡಲಿಲ್ಲ. ತನಿಖೆ ಮಾಡದೇ ಆ ವಿಚಾರ ಏತಕ್ಕಾಗಿ ಮುಚ್ಚಿಟ್ಟಿದ್ದು, ನಿಮ್ಮ ಮಗ ವಿದೇಶಕ್ಕೆ ಹೋದ ಆ ದಿನ ನೀವೇ ಅನುಮತಿ ಕೊಟ್ಟು ಕಳಿಸಿಕೊಟ್ರಾ ಎಂದು ಹೆಚ್.ಡಿ.ಕೆ ಪ್ರಶ್ನೆ ಮಾಡಿದ್ದಾರೆ.
ಸದ್ಯ ಪ್ರತಿನಿತ್ಯ ಪೇಪರ್ ತೆಗೆದ್ರೆ ಸಾಕು ಬರಿ ಕೊಲೆ, ಅತ್ಯಾಚಾರಗಳಂತಹ ಕೆಟ್ಟ ಸುದ್ದಿಗಳೆ ಹೆಚ್ಚಾಗಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ದೊಡ್ಡ ಮಾಡಿ ನಮ್ಮ ಕುಟುಂಬವನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸುವ ಹುನ್ನಾರ ಮಾಡಿದ್ದೀರಾ? ಪೆನ್ ಡ್ರೈವ್ ಸೂತ್ರಧಾರಿ, ಅದನ್ನು ಹರಿಬಿಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಮಾಡಿದ್ದೀರಾ, ಈ ಸಂಬಂಧ ಯಾರನ್ನಾದರೂ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಜೊತೆಗೆ ಈ ಪ್ರಕರಣದ ಆರಂಭದಿಂದಲೂ ನಾನು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಲೇ ಬಂದಿದ್ದೇನೆ. ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಪೆನ್ ಡ್ರೈವ್ ಹಂಚಿಕೆ ಮಾಡೋದು ಅಪರಾಧವಲ್ಲ ಎಂದು ಹೇಳ್ತಾರೆ. ಅದಕ್ಕಿಂತ ದೊಡ್ಡ ಅಪರಾಧ ವಿಡಿಯೋ ಅಂತಾರೆ. ಹೆಣ್ಣು ಮಕ್ಕಳ ಚಿತ್ರವನ್ನು ಬ್ಲರ್ ಮಾಡದೇ ಹರಿಬಿಟ್ಟಿದ್ದಾರೆ. ಅವರಿಗೆ ಏನು ನ್ಯಾಯ ಕೊಡ್ತೀರಾ, ಅವರಿಗೆ ಯಾವ ರೀತಿ ಸಾಂತ್ವನ ಹೇಳ್ತೀರಾ , ಸರ್ಕಾರದಿಂದ ಏನು ಕೊಡೋಕೆ ಸಾಧ್ಯ ಎಂಬೆಲ್ಲಾ ಪ್ರಶ್ನೆಗಳನ್ನು ಮಾಡಿದ್ದಾರೆ.
ಇನ್ನೂ ನಾಲ್ಕು ಗೋಡೆಗಳ ಮಧ್ಯೆ ನಡೆದಿರೋದೇ ಬೇರೆ, ಆದರೆ ಅದನ್ನು ಬೀದಿಗೆ ತಂದವರು ನೀವು. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ತಕ್ಷಣ ಆ ಕುಟುಂಬಗಳಿಗೆ ಸಮಸ್ಯೆಯಾಗದಂತೆ, ತಪ್ಪು ಮಾಡಿದವನಿಗೆ ಶಿಕ್ಷೆ ಕೊಡಬೇಕಿತ್ತು. ಅದನ್ನೆಲ್ಲಾ ಬಿಟ್ಟು ಬ್ರದರ್, ಸ್ವಾಮಿ ಅಂತಾ ಮಾತಾಡುತ್ತೀರಾ, ನಿಮ್ಮ ಯೋಗ್ಯತೆಗೆ ಮಾನ ಮರ್ಯಾದೆ ಇದ್ದರೇ ನೀವು ಈ ರೀತಿ ಮಾಡುತ್ತಿರಲಿಲ್ಲ. ನಿಮ್ಮ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮೊದಲು ನಿಮ್ಮ ಮನೆಯಲ್ಲಿ ಏನೇನು ಆಗಿದೆ ಮೊದಲು ಸರಿಪಡಿಸಿಕೊಳ್ಳಿ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.