ಹಣಕ್ಕಾಗಿ ಬೇಡಿಕೆಯಿಟ್ಟ ಕಿರಾತಕರು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಮಾಡುವಂತಹ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ವ್ಯಾಪಾರಿಯನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಅರ್ಜುನ್ ಮಡಿವಾಳ ಎಂಬಾತ ಹಲ್ಲೆಗೊಳಗಾದ ವ್ಯಾಪಾರಿ ಎನ್ನಲಾಗಿದೆ. ನಗರದ ಹಾಗರಗಾ ಕ್ರಾಸ್ ಬಳಿಯಿರುವ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಅರ್ಜುನ್ ಮಡಿವಾಳ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿಯಾಗಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದ. ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಿ ಮಾರಾಟ ಮಾಡಲು ಬಂದಾಗ ಇಮ್ರಾನ್ ಪಟೇಲ್, ಮಹಮದ್ ಮತೀನ್ ಸೇರಿದಂತೆ ಹಲವರು ಅರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಅರ್ಜುನ್ ಮೇಲೆ ಹಲ್ಲೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಇನ್ನೂ ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಎ1 ಆರೋಪಿಯಾಗಿರುವ ಇಮ್ರಾನ್ ಸೆಕೆಂಡ್ ಹ್ಯಾಂಡ್ ಕಾರಿಗಾಗಿ ಅರ್ಜುನ್ ನನ್ನು ಸಂಪರ್ಕ ಮಾಡಿದ್ದನಂತೆ. ತನಗೆ ಒಳ್ಳೆಯ ಕಾರು ಕೊಡಿಸುವಂತೆ ಅರ್ಜುನ್ ಗೆ ಕೇಳಿದ್ದು, ಅದರಂತೆ ಮೊಹಮದ್ ರೆಹಮಾನ್ ಹಾಗೂ ಸಮೀರುದ್ದಿನ್ ಎಂಬುವವರಿಗೆ ಮುಂಗಡ ಹಣ ನೀಡಿದ ಇಮ್ರಾನ್ ಗೆ ಕಾರು ಕೊಡಿಸಲಾಗಿತ್ತು. ಇಮ್ರಾನ್ ಬಾಕಿ ಹಣ ಕೊಡದೇ ಇದಿದ್ದರಿಂದ ಕಾರ್ ದಾಖಲೆಗಳನ್ನು ಅರ್ಜುನ್ ನೀಡಿರಲಿಲ್ಲ. ದಾಖಲೆಗಳನ್ನು ನೀಡುವಂತೆ ಇಮ್ರಾನ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಳಿಕ ಮೇ.4 ರಂದು ಬಾಕಿ ಹಣ ನೀಡುತ್ತೇನೆ ಬಾ ಎಂದು ಅರ್ಜುನ್ ರನ್ನು ಗ್ಯಾಂಡ್ ಕರೆಸಿಕೊಂಡಿದೆ. ಬಳಿಕ ಅರ್ಜುನ್ ನನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ವ್ಯಾಪಾರಿ ಅರ್ಜುನ್ ನನ್ನು ಬಂಧಿಸಿ ಹಣಕ್ಕೆ ಹಲ್ಲೆ ಮಾಡಿದ್ದಾರೆ. ಸ್ವಲ್ಪ ಹಣವನ್ನು ಸಹ ಅಕೌಂಟ್ ಗೆ ಹಾಕಿಸಿಕೊಂಡಿದ್ದರಂತೆ. ಮತಷ್ಟು ಹಣ ನೀಡಬೇಕೆಂದು ಮಾರ್ಮಂಗಕ್ಕೆ ವಿದ್ಯುತ್ ಶಾಕ್ ನೀಡಿ ಹಿಂಸೆ ಕೊಟ್ಟಿದ್ದಾರಂತೆ. ಈ ಘಟನೆಗೆ ಸಂಬಂಧಿಸಿದಂತೆ ಇಮ್ರಾನ್ ಪಟೇಲ್, ಮೊಹ್ಮದ್ ಮತೀನ್, ಮೊಹ್ಮದ್ ಜಿಯಾ ಉಲ್ ಹುಸನ್, ಮೊಹ್ಮದ್ ಅಜ್ಮಲ್ ಶೇಕ್, ಹುಸೇನ್, ರಮೇಶ್, ಸಾಗರ್ ಕೋಳಿ ಸೇರಿದಂತೆ 12 ಮಂದಿಯ ಮೇಲೆ ದೂರು ದಾಖಲಾಗಿದ್ದು, ಐದು ಮಂದಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.