Guest Teacher – ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮತ್ತು ಸೇವೆ ಖಾಯಂಮಾತಿ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಡಿ.13ಕ್ಕೆ ಬೆಳಗಾವಿಯ ಸುವರ್ಣ ಗಾರ್ಡನ್ ವಿಧಾನಸೌಧದ ಮುಂಭಾಗ ಬೆಳಗಾವಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಪ್ರತಿಭಟನೆಗೆ ಗುಡಿಬಂಡೆ ತಾಲೂಕು ಘಟಕದ ವತಿಯಿಂದ ಬೆಂಬಲ ನೀಡುವುದಾಗಿ ಗುಡಿಬಂಡೆ ಅತಿಥಿ ಶಿಕ್ಷಕರು ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಅರುಣ, ಎಲ್ಲಾ ಶಿಕ್ಷಕರಂತೆ ನಾವೂ ಸಹ ಕೆಲಸ ಮಾಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ನಮ್ಮನ್ನು ಕೀಳಾಗಿ ನೋಡುತ್ತಿದೆ. ಜೊತೆಗೆ ಸರಿಯಾಗಿ ನಮಗೆ ಗೌರವಧನ ಸಹ ನೀಡುತ್ತಿಲ್ಲ. ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯನಿರ್ವಹಿಸಿದವರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಸೇವಾಭದ್ರತೆ ಒದಗಿಸಬೇಕು. ಸರ್ಕಾರಿ ಶಿಕ್ಷಕರಂತೆ ಬೇಸಿಗೆಯ ರಜೆಯನ್ನು ಸೇರಿದಂತೆ 12 ತಿಂಗಳು ವೇತನ ನೀಡುವುದರ ಜೊತೆಗೆ ಸೇವೆಯಲ್ಲಿ ಮುಂದುವರೆಸಿ ನೇಮಕಾತಿಯಲ್ಲಿ ಪ್ರತಿ ವರ್ಷ ಶೇ.5ರಷ್ಟು ಕೃಪಾಂಕ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
ಅತಿಥಿ ಶಿಕ್ಷಕ ಎಂಬ ಪದ ಬದಲು ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎಂದು ನಮೂದಿಸಬೇಕು. ಖಾಯಂ ಶಿಕ್ಷಕರಂತೆ ನಮಗೂ ಸ್ಥಾನಮಾನ ಹಾಗೂ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು. ಅತಿಥಿ ಶಿಕ್ಷಕರಿಗೆ ಜೀವ ವಿಮೆ ಸೌಲಭ್ಯ ಒದಗಿಸಬೇಕು ಎಂಬುದು ನಮ್ಮ ಆಗ್ರಹವಾಗಿದ್ದು, ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.13ಕ್ಕೆ ಬೆಳಗಾವಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಅತಿಥಿ ಶಿಕ್ಷಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಈ ವೇಳೆ ಗುಡಿಬಂಡೆ ತಾಲೂಕು ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್ಲಪ್ಪ, ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಮಹಾಲಕ್ಷ್ಮೀ, ರೋಜ, ರಾಧ, ಶ್ರೀಮತಿ, ಮೀನಾ, ಗಜೇಂದ್ರ, ಶಿವಶಂಕರ್, ಭವ್ಯ, ರಾಜೇಶ್, ಗೌತಮಿ, ಸುಷ್ಮಾ, ಚಂದ್ರಮ್ಮ ಸೇರಿದಂತೆ ಹಲವರು ಹಾಜರಿದ್ದರು.