Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ಬಸ್ ಡಿಪೋ ನಿರ್ಮಾಣ ಸೇರಿದಂತೆ ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದರೂ ಸಹ ನಮ್ಮ ಬೇಡಿಕೆ ಈಡೇರದ ಕಾರಣ ಈ ಬಾರಿ ಅನಿರ್ದಿಷ್ಟಾವಧಿ ಧರಣಿ ಹಾಗೂ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ವತಿಯಿಂದ ತೀರ್ಮಾನಿಸಲಾಯಿತು.

Protest – 10 ವರ್ಷಗಳ ಹಿಂದೆ ಜಮೀನು ಮಂಜೂರಾದರೂ, ಡಿಪೋ ಮಾತ್ರ ಇಲ್ಲ!
ಈ ವೇಳೆ ಮಾತನಾಡಿದ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ಜಿ.ವಿ.ಗಂಗಪ್ಪ, ಸುಮಾರು 10 ವರ್ಷಗಳ ಹಿಂದೆಯೇ ಗುಡಿಬಂಡೆಯಲ್ಲಿ ಬಸ್ ಡಿಪೋ ನಿರ್ಮಾಣಕ್ಕಾಗಿ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೂ ಇಲ್ಲಿಯವರೆಗೂ ಬಸ್ ನಿರ್ಮಾಣ ಆಗಲಿಲ್ಲ. ಈ ಸಂಬಂಧ ಅನೇಕ ಬಾರಿ ಹೋರಾಟಗಳನ್ನು ನಡೆಸಲಾಗಿದೆ. ಕನಿಷ್ಟ ಮಿನಿ ಡಿಪೋ ನಿರ್ಮಾಣ ಮಾಡಿ ಎಂತಲೂ ಮನವಿ ಮಾಡಲಾಗಿತ್ತು. ಅದೂ ಸಹ ಈಡೇರಲಿಲ್ಲ. ಇದರ ಜೊತೆಗೆ ಗುಡಿಬಂಡೆಗೆ ನಿಗಧಿಪಡಿಸಿರುವ ಮಾರ್ಗಗಳೂ ಸಹ ಸರಿಯಾಗಿ ಸಂಚರಿಸುತ್ತಿಲ್ಲ. ಕೆಲವು ತಿಂಗಳುಗಳ ಹಿಂದೆ ಈ ಸಮಸ್ಯೆ ಈಡೇರಿಸಲು ಹೋರಾಟ ನಡೆಸಲಾಗಿತ್ತು. ಹೋರಾಟ, ಪ್ರತಿಭಟನೆ ನಡೆಸಿದ ಕೆಲವು ದಿನಗಳ ಮಾತ್ರ ಬಸ್ ಗಳು ಸರಿಯಾಗಿ ಸಂಚರಿಸುತ್ತವೆ. ಕೆಲವು ದಿನಗಳಾದ ಬಳಿಕ ಯಥಾಸ್ಥಿತಿ ನಮ್ಮ ಪರಿಸ್ಥಿತಿಯಾಗುತ್ತದೆ.
Protest – ನ.23 ರ ಸಭೆಗೆ ಎಲ್ಲರೂ ಭಾಗವಹಿಸಿ
ಆದ್ದರಿಂದ ಈ ಬಾರಿ ಅನಿರ್ದಿಷ್ಟಾವಧಿ ಧರಣಿಯನ್ನು ಉಗ್ರ ರೀತಿಯಲ್ಲಿ ನಡೆಸಲು ಹೋರಾಟ ವೇದಿಕೆಯ ಎಲ್ಲರೂ ಸೇರಿ ತೀರ್ಮಾನಿಸಲಾಗಿದೆ. ಈ ಸಂಬಂಧ ನವೆಂಬರ್ 23 ರಂದು ತಾಲೂಕಿನ ಎಲ್ಲಾ ಪಕ್ಷಗಳು, ಸಂಘ ಸಂಸ್ಥೆಗಳು ಅಧ್ಯಕ್ಷ-ಕಾರ್ಯದರ್ಶಿಗಳನ್ನೊಳಗೊಂಡ ಸಭೆಯನ್ನು ನಡೆಸಿ ಪ್ರತಿಭಟನೆಯ ದಿನಾಂಕ ಹಾಗೂ ರೂಪುರೇಷಗಳನ್ನು ಸಿದ್ದತೆ ನಡೆಸಲಾಗುವುದು. ಈ ಸಭೆಗೆ ಎಲ್ಲರೂ ಆಗಮಿಸಬೇಕೆಂದು ಮನವಿ ಮಾಡಿದರು. Read this also : BWSSB ನೇಮಕಾತಿ 2025: 224 ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ನ.25 ರೊಳಗೆ ಅರ್ಜಿ ಸಲ್ಲಿಸಿ!
Protest – ಉಗ್ರ ಹೋರಾಟವೊಂದೆ ನಮಗಿರುವ ಮಾರ್ಗ
ಈ ಸಮಯದಲ್ಲಿ ಗುಡಿಬಂಡೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಲಕ್ಷ್ಮೀಪತಿ ಮಾತನಾಡಿ, ಬಸ್ ಡಿಪೋ ಹಾಗೂ ಸಮರ್ಪಕ ಬಸ್ ಗಳ ಸಂಚಾರಕ್ಕಾಗಿ ಹೋರಾಟಗಳನ್ನು, ಪ್ರತಿಭಟನೆಗಳನ್ನು ನಡೆಸಿ ಸಾಕಾಗಿದೆ. ಈಗಾಗಲೇ ಜನಪ್ರತಿನಿಧಿಗಳೂ ಸಹ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಕೊನೆಯ ಪ್ರಯತ್ನವಾಗಿ ಸಿಎಂ ಸಿದ್ದರಾಮಯ್ಯನವರನ್ನು ಗುಡಿಬಂಡೆಯಿಂದ ನಿಯೋಗ ಭೇಟಿಯಾಗಿ ಸಾರಿಗೆ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ. ಆಗಲೂ ಸಮಸ್ಯೆ ಈಡೇರದೇ ಇದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದು ಬಿಟ್ಟರೇ ನಮಗೆ ಬೇರೆ ದಾರಿಯಿಲ್ಲ ಎಂದರು.

Protest – ತೆಲಂಗಾಣ ಮಾದರಿ ಹೋರಾಟಕ್ಕೆ ಮುಂದಾಗಬೇಕೇ?
ನಂತರ ಪಪಂ ಮಾಜಿ ಅಧ್ಯಕ್ಷ ದ್ವಾರಕನಾಥನಾಯ್ಡು ಮಾತನಾಡಿ, ಗುಡಿಬಂಡೆಗೆ ಬಸ್ ಡಿಪೋ ಹಾಗೂ ಸಾರಿಗೆ ವ್ಯವಸ್ಥೆ ಕೇವಲ ಕೆಲವರಿಗೆ ಮಾತ್ರ ಸೀಮಿತವಾದಂತಿದೆ. ನಮ್ಮ ಸಮಸ್ಯೆಗಳು ಬಗೆಹರಿಯಬೇಕಾದರೇ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸಾರಿಗೆ ಸಚಿವರು ಗುಡಿಬಂಡೆ ಜನರ ನ್ಯಾಯಯುತ ಹಾಗೂ ಶಾಂತಿಯುತ ಹೋರಾಟ ಪ್ರತಿಭಟನೆಯನ್ನು ಮಾತ್ರ ನೋಡಿದ್ದಾರೆ. ನಮ್ಮ ಸಹನೆಯ ಕಟ್ಟೆ ಹೊಡೆದಿದೆ. ಇನ್ನು ಮುಂದೆ ನಾವು ಸಹ ತೆಲಂಗಾಣ ಮಾದರಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಮುಂದೆ ನಡೆಯುವಂತಹ ಎಲ್ಲಾ ಆಗುಹೋಗುಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದರು.
ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ಬಿ.ಅಮೀರ್ ಜಾನ್, ಶ್ರೀನಿವಾಸ್ ಯಾದವ್, ಬುಲೆಟ್ ಶ್ರೀನಿವಾಸ್, ರಾಜಪ್ಪ, ನರೇಂದ್ರ, ರಮಣಪ್ಪ, ಶ್ರೀನಿವಾಸ್ ಗಾಂಧಿ ಸೇರಿದಂತೆ ಹಲವರು ಇದ್ದರು.
