Kannada Ratha – ಮಂಡ್ಯ ನಗರದಲ್ಲಿ ಡಿಸೆಂಬರ್ 20 ರಿಂದ 22ರ ವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು (Kannada Ratha) ಗುಡಿಬಂಡೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗೌರಿಬಿದನೂರು ಗಡಿಯಿಂದ ತಾಲೂಕು ಆಡಳಿತ ಹಾಗೂ ಕನ್ನಡಪರ ಸಂಘಟನೆಗಳು ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿದರು. ಬಳಿಕ ಗುಡಿಬಂಡೆ ಪಟ್ಟಣದ ತಿರುಮಲ ನಗರದಿಂದ ಹೊಸ ಬಸ್ ನಿಲ್ದಾಣದ ಬಳಿಯಿರುವ ಅಂಬೇಡ್ಕರ್ ವೃತ್ತದ ವರೆಗೂ ಕಲಾತಂಡಗಳೊಂದಿಗೆ ಶಾಲಾ ವಿದ್ಯಾರ್ಥಿಗಳು, ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರುಗಳು ಸೇರಿದಂತೆ ಅನೇಕರು ಮುಖ್ಯರಸ್ತೆಯಲ್ಲಿ ಮೆರವಣಿಗೆಯ ಮೂಲಕ ಬಾಗೇಪಲ್ಲಿಗೆ ಬೀಳ್ಕೊಟ್ಟರು.
ಈ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಗುಡಿಬಂಡೆ ತಾಲೂಕಿನಲ್ಲಿ ಇಡೀ ವಿಶ್ವದಲ್ಲೇ ಹೆಸರು ಮಾಡಿದಂತಹ ಅನೇಕ ಗಣ್ಯರಿದ್ದಾರೆ. ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಗಡಿಭಾಗದಲ್ಲಿದ್ದರೂ ಕನ್ನಡ ಭಾಷೆ ಇಲ್ಲಿ ಶ್ರೀಮಂತವಾಗಿದೆ. ಕನ್ನಡಿಗರಲ್ಲಿ ಕನ್ನಡಾಭಿಮಾನದ ಜತೆಗೆ ಕನ್ನಡತನವನ್ನು ಬೆಳೆಸುವ ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಹಮ್ಮಿಕೊಂಡಿದೆ. ಕನ್ನಡ ನಾಡು ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು. ಕನ್ನಡ ಭಾಷೆಯ ಅಭಿವೃದ್ದಿಗೆ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.
ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ತಾಲೂಕು ಅಧ್ಯಕ್ಷ ಬಿ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಪಪಂ ಅಧ್ಯಕ್ಷ ವಿಕಾಸ್, ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.