Govt Officials – ಮೂಲಭೂತ ಸೌಕರ್ಯಗಳು, ಸೇವಾ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಈ ವೇಳೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್ ಮಾತನಾಡಿ, ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಸೆಪ್ಟಂಬರ್ ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಎರಡನೇ ಬಾರಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ತನಕ ಈ ಬಾರಿ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದರು.
ಬಳಿಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವಿದ್ಯಾ ಪವಾರ್ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಪ್ರಮುಖ ಬೇಡಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಸೇರಿವೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಘವು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಮೂಲಭೂತ ಸಮಸ್ಯೆಗಳಿದ್ದು, ಮುಖ್ಯವಾಗಿ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಶನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆ, ಇಲಾಖೆಯಿಂದ ಅಭಿವೃದ್ದಿ ಪಡಿಸಿರುವ ಸುಮಾರು 17 ಕ್ಕೂ ಹೆಚ್ಚು ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಾಗಿರುವ ಮೊಬೈಲ್ ಸಾಧನ, ಹಾಗು ಲ್ಯಾಪ್‌ಟಾಪ್ ಹಾಗು ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್ ಹಾಗು ಸ್ಕ್ಯಾನರ್ ಗಳನ್ನು ಒದಗಿಸದೆ ಹೇಗೆ ಕರ್ತವ್ಯ ನಿರ್ವಹಿಸಬೇಕು. ಅದ್ದರಿಂದ ನಮ್ಮೆಲ್ಲಾ ಸಮಸ್ಯೆಗಳ ಈಡೇರಿಕೆಗಾಗಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಪದಾಧಿಕಾರಿಗಳಾದ ಶಿವಪ್ರಸಾದ್, ಲೋಕೇಶ್, ಮಂಜುಳ, ಸುದರ್ಶನ್, ನಾಗರಾಜ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.