G V Sriramareddy – ಚಿತ್ರಾವತಿ ಡ್ಯಾಂಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರಿಡುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರವನ್ನು ಖಂಡಿಸಿ, ದಿವಂಗತ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಹೆಸರನ್ನೇ ಜಲಾಶಯಕ್ಕೆ ಇಡಬೇಕೆಂದು ಒತ್ತಾಯಿಸಿ, ಬಾಗೇಪಲ್ಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಮತ್ತು ಸಿಪಿಐ(ಎಂ) ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ಸಚಿವ ಡಾ. ಎಂ.ಸಿ. ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
G V Sriramareddy – ಜಿ.ವಿ. ಶ್ರೀರಾಮರೆಡ್ಡಿ ಅವರ ಕೊಡುಗೆಗಳನ್ನು ಸ್ಮರಿಸಿದ ಮುಖಂಡರು
ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ(ಎಂ) ಮುಖಂಡ ಡಾ. ಅನಿಲ್ ಕುಮಾರ್, ಚಿತ್ರಾವತಿ ಜಲಾಶಯ ನಿರ್ಮಾಣಕ್ಕೆ ಶ್ರೀರಾಮರೆಡ್ಡಿ ಅವರು ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿದರು. “ಶ್ರೀರಾಮರೆಡ್ಡಿ ಅವರು ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ನಿರಂತರವಾಗಿ ಹೋರಾಡಿದ್ದರು. ಫ್ಲೋರೊಸಿಸ್ ಸಮಸ್ಯೆಗಳಿಂದ ನರಳುತ್ತಿದ್ದ ಜನರಿಗೆ ಶುದ್ಧ ನೀರು ಒದಗಿಸಲು ಅವರು ಪ್ರಯತ್ನಿಸಿದ್ದರು. ಅವರ ಹೋರಾಟದ ಫಲವಾಗಿಯೇ ಚಿತ್ರಾವತಿ ಬ್ಯಾರೇಜ್ ನಿರ್ಮಾಣವಾಯಿತು” ಎಂದು ಹೇಳಿದರು.
ಡಾ. ಅನಿಲ್ ಕುಮಾರ್, ಶ್ರೀರಾಮರೆಡ್ಡಿ ಅವರು ಕೇವಲ ಜಲಾಶಯ ಮಾತ್ರವಲ್ಲದೆ, ವಂಡಮಾನ್ ಮತ್ತು ಹಂಪಸಂದ್ರದಲ್ಲಿ ಜಲಾಶಯ ನಿರ್ಮಾಣ, ಶಾಲೆ, ಕಾಲೇಜು, ಬಸ್ ನಿಲ್ದಾಣ, ಮತ್ತು 100 ಅಡಿ ಅಗಲದ ಮುಖ್ಯ ರಸ್ತೆಯ ಅಭಿವೃದ್ಧಿ ಸೇರಿದಂತೆ ಅನೇಕ ಶಾಶ್ವತ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. Read this also : ಚಿತ್ರಾವತಿ ಅಣೆಕಟ್ಟು ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ : ಜಯರಾಮರೆಡ್ಡಿ
G V Sriramareddy – ರಾಜಕೀಯ ದುರುದ್ದೇಶದಿಂದ ಹೆಸರು ಬದಲಾವಣೆಗೆ ಹುನ್ನಾರ
“ಕಾಂಗ್ರೆಸ್ ನಾಯಕರು ರಾಜಕೀಯ ದುರುದ್ದೇಶದಿಂದ ಶ್ರೀರಾಮರೆಡ್ಡಿ ಅವರ ಹೆಸರನ್ನು ತೆಗೆದು ಎಸ್.ಎಂ. ಕೃಷ್ಣ ಅವರ ಹೆಸರನ್ನು ಇಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಡಾ. ಅನಿಲ್ ಕುಮಾರ್ ಆರೋಪಿಸಿದರು. “ಬೆಂಗಳೂರಿನಲ್ಲಿ ವಿಷಪೂರಿತ ಕೊಳಚೆ ನೀರನ್ನು ಕೆರೆಗಳಿಗೆ ಹರಿಸಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್, ಇಲ್ಲಿ ಜಲಾಶಯದ ಹೆಸರನ್ನು ಬದಲಿಸುವ ಮೂಲಕ ನಮ್ಮ ಭಾಗದ ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ಚಿತ್ರಾವತಿ ಜಲಾಶಯದ ಹೆಸರು ಬದಲಾಯಿಸಲು ನಾವು ಬಿಡುವುದಿಲ್ಲ. ಒಂದು ವೇಳೆ ಹೆಸರು ಬದಲಾವಣೆ ಮಾಡಿದರೆ, ಸಿಪಿಐ(ಎಂ) ಪಕ್ಷದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಘುರಾಮರೆಡ್ಡಿ, ಚೆನ್ನರಾಯಪ್ಪ, ಮಂಜೂರ್ ಅಹಮ್ಮದ್, ಜಿ.ಎಂ. ರಾಮಕೃಷ್ಣಪ್ಪ, ಟಿ. ಲಕ್ಷ್ಮೀನಾರಾಯಣರೆಡ್ಡಿ, ಮುನಿವೆಂಕಟಪ್ಪ, ಸಾಯಿಜ್ಯೋತಿ, ಶ್ರೀನಿವಾಸರೆಡ್ಡಿ, ನರಸಿಂಹರೆಡ್ಡಿ, ಓಬಳರಾಜು ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.