Farmers Protest: ಬಾಕಿಯಿರುವ ಹಾಲಿನ ಪ್ರೋತ್ಸಾಹದನ ಬಿಡುಗಡೆ ಮಾಡುವುದು ಹಾಗೂ ಹಾಲಿನ ಬೆಲೆ ಹೆಚ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ವತಿಯಿಂದ ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಮುಂದೆ ಫೆ.10 ರಿಂದ ಅನಿರ್ದಿಷ್ಟವದಿ ಧರಣಿ ಹಮ್ಮಿಕೊಂಡಿದ್ದು, ಈ ಧರಣಿಯಲ್ಲಿ ರಾಜ್ಯದ ಎಲ್ಲಾ ಹೈನುಗಾರರು ಹಾಗೂ ಡೈರಿಗಳ ಅಧ್ಯಕ್ಷರು ಭಾಗವಹಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮನವಿ ಮಾಡಿದರು.

ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ ಹಾಲು ಉತ್ಪಾದಕರಿಗೆ ಸುಮಾರು 620 ಕೋಟಿ ಪ್ರೋತ್ಸಾಹದನ ಬಾಕಿಯಿದೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜೊತೆಗೆ ಹಾಲು ಉತ್ಪಾದಕರು ಡೈರಿಗೆ ಹಾಕುವ ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಟ 50 ರೂಪಾಯಿಗಳಿಗೆ ಹೆಚ್ಚಿಸಬೇಕು. ಒಕ್ಕೂಟದಲ್ಲಿ ಹೆಚ್ಚುವರಿ ನೌಕರರನ್ನು ನೇಮಿಸಿಕೊಂಡು ದುಂದು ವೆಚ್ಚ ಮಾಡುವುದನ್ನು ನಿಲ್ಲಿಸಬೇಕು. ಪಶು ಆಹಾರದ ಗುಣಮಟ್ಟ ಕಡಿಮೆಯಿದ್ದರೂ ಅದರ ಬೆಲೆ ಏರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಧರಣಿಗೆ ಹಾಲು ಉತ್ಪಾದಕರು, ಹಾಲು ಡೈರಿಗಳ ಆಡಳಿತ ಮಂಡಳಿ ಭಾಗಿಯಾಗಬೇಕೆಂದು ಮನವಿ ಮಾಡಿದರು.

ಬಳಿಕ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಸೋಮಶೇಖರ್ ಮಾತನಾಡಿ, ಕಳೆದ 44 ವರ್ಷಗಳಿಂದ ಕೋಡಿಹಳ್ಳಿ ಚಂದ್ರಶೇಖರ ಸಹಯೋಗದಲ್ಲಿ ರೈತ ಸಂಘ ಅನೇಕ ರೈತಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಇಂದು ರೈತರಿಗೆ ಹೆಚ್ಚು ಅನಾನುಕೂಲವಾಗುತ್ತಿರುವ ಕೆ.ಎಂ.ಎಫ್. ವಿರುದ್ದ ಪ್ರತಿಭಟನೆ ಮಾಡಲಾಗುತ್ತಿದೆ, ಹೆಚ್ಚು ಹಾಲು ಉತ್ಪಾದಕರು ತಮ್ಮ ಹಕ್ಕನ್ನು ಪಡೆಯಲು ಧರಣಿಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ಸಮಯದಲ್ಲಿ ರೈತ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ವೆಂಕಟರೋಣಪ್ಪ, ಮುಖಂಡರಾದ ವೆಂಕಟೇಶಪ್ಪ, ಶ್ರೀನಿವಾಸ, ಆದಿನಾರಾಯಣಪ್ಪ, ನರಸಿಂಹರೆಡ್ಡಿ ಸೇರಿ ಇತರರು ಇದ್ದರು.