Bengaluru – ಪ್ರೀತಿ ಹೆಸರಿನಲ್ಲಿ ನಡೆದ ಹೈಟೆಕ್ ಸುಲಿಗೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತಮ್ಮ ಮಾಜಿ ಗೆಳೆಯನನ್ನು ಮಾತಿನ ನೆಪದಲ್ಲಿ ಕರೆಸಿ, ಅಪಹರಿಸಿ ಬರೋಬ್ಬರಿ ₹2.5 ಕೋಟಿ ಸುಲಿಗೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದುಬೈ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಲಾರೆನ್ಸ್ ಮೆಲ್ವಿನ್ ಎಂಬವರನ್ನು ಅಪಹರಿಸಿದ್ದ ಮಾಜಿ ಗೆಳತಿ ಮಹಿಮಾ ವಾಟ್ ಮತ್ತು ಆಕೆಯ ಸಹಚರರು ಈ ಕೃತ್ಯದ ಹಿಂದೆ ಇದ್ದಾರೆ.

Bengaluru – ಮಾಜಿ ಪ್ರಿಯತಮೆಯ ಬೃಹತ್ ಸಂಚು
ಆರ್.ಟಿ. ನಗರದ ದಿನ್ನೂರು ಮೇನ್‌ನ ಮೊಹಮ್ಮದ್ ಆಸೀಫ್, ಮೊಹಮ್ಮದ್ ಸೋಹೆಲ್, ಡಿ.ಜೆ. ಹಳ್ಳಿಯ ಸಲ್ಮಾನ್ ಪಾಷಾ ಮತ್ತು ಕೆ.ಜಿ. ಹಳ್ಳಿಯ ಶಾಂಪುರದ ಮೊಹಮ್ಮದ್ ನವಾಜ್ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ಮಹಿಮಾ ವಾಟ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಗಾಗಿ ಶೋಧ ನಡೆಸುತ್ತಿದ್ದಾರೆ. ಲಾರೆನ್ಸ್ ಮೆಲ್ವಿನ್, ಕೇರಳ ಮೂಲದವರಾಗಿದ್ದು, ದುಬೈನಲ್ಲಿರುವ ರಾಯನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳು ರಜೆ ಪಡೆದು ತಮ್ಮ ಪೋಷಕರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಪೋಷಕರು ಕಾರಿನಲ್ಲಿ ಕೇರಳದಿಂದ ಬರುತ್ತಿದ್ದಾಗ, ಮೆಲ್ವಿನ್ ವಿಮಾನದ ಮೂಲಕ ಬೇಗ ಬಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.
Bengaluru – ಅಂದಿನ ರಾತ್ರಿ ನಡೆದಿದ್ದೇನು?
ಜುಲೈ 14ರಂದು ರಾತ್ರಿ 7 ಗಂಟೆಗೆ ಮೆಲ್ವಿನ್‌ಗೆ ಅಪರಿಚಿತ ನಂಬರ್‌ನಿಂದ ಮಹಿಮಾ ಕರೆ ಮಾಡಿದ್ದಳು. ನಂತರ ಮುಂಜಾನೆ 3 ಗಂಟೆಗೆ ಮತ್ತೆ ಕರೆ ಮಾಡಿ ಪದೇ ಪದೇ ಭೇಟಿಗೆ ಒತ್ತಾಯಿಸಿದ್ದಳು. “ಕ್ಯಾಬ್ ಬುಕ್ ಮಾಡಿದ್ದೇನೆ, ಬಾ” ಎಂದು ಮೆಸೇಜ್ ಕೂಡ ಕಳುಹಿಸಿದ್ದಳು. ಮೆಲ್ವಿನ್ ಹೋಟೆಲ್‌ನಿಂದ ಹೊರಬಂದು ನಿಂತಾಗ, ಅಲ್ಲಿ ಕ್ಯಾಬ್ ಚಾಲಕನಿದ್ದ. ಮಹಿಮಾ ಬುಕ್ ಮಾಡಿದ್ದಾಳಾ ಎಂದು ಕೇಳಿದಾಗ, ಚಾಲಕ “ಹೌದು” ಎಂದಿದ್ದಾನೆ.
ಮೆಲ್ವಿನ್ ಕಾರಿನಲ್ಲಿ ಕುಳಿತ ನಂತರ ಚಾಲಕ ಕಾರನ್ನು ಕೋರಮಂಗಲದ ಕಡೆಗೆ ತಿರುಗಿಸದೆ ನೇರವಾಗಿ ಹೋಗಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ, “ನಾನು ಕರೆದುಕೊಂಡು ಹೋದ ಕಡೆ ಬರುವಂತೆ” ಆತ ತಾಕೀತು ಮಾಡಿದ್ದಾನೆ. ತಕ್ಷಣ ಕಾರು ನಿಂತಿದ್ದು, ಆಗ ಇಬ್ಬರು ವ್ಯಕ್ತಿಗಳು ಕಾರಿಗೆ ಹತ್ತಿ, ಮೆಲ್ವಿನ್ ಎಡ-ಬಲ ಕುಳಿತಿದ್ದಾರೆ.
Bengaluru – ₹2.5 ಕೋಟಿ ಬೇಡಿಕೆ, ಚಿತ್ರಹಿಂಸೆ!
ಮೆಲ್ವಿನ್ ಭಯದಿಂದ ಕೂಗಿಕೊಳ್ಳಲು ಯತ್ನಿಸಿದಾಗ, ಆರೋಪಿಗಳು ಅವರ ಮುಖಕ್ಕೆ ಬಟ್ಟೆ ಹಾಕಿ, ಕೈಗಳಿಂದ ಗುದ್ದಿದ್ದಾರೆ. ಬಳಿಕ ಅವರ ಬಳಿ ಇದ್ದ ₹1 ಲಕ್ಷ ನಗದು ಮತ್ತು 2 ಮೊಬೈಲ್ ಕಿತ್ತುಕೊಂಡಿದ್ದಾರೆ. ಮೊಬೈಲ್ ಪಾಸ್‌ವರ್ಡ್ ಹೇಳಲು ನಿರಾಕರಿಸಿದಾಗ, ಅವರ ಮುಖಕ್ಕೆ ಹೊಡೆದಿದ್ದಾರೆ. ನಂತರ ಕಣ್ಣುಗಳನ್ನು ಮುಚ್ಚಿ ಯಾವುದೋ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಕೂಡಿ ಹಾಕಿದ್ದಾರೆ.
ಅಲ್ಲಿಗೆ ಮತ್ತೊಬ್ಬ ವ್ಯಕ್ತಿ ಬಂದು, ₹50 ಲಕ್ಷ ನಗದನ್ನು ನೀಡುವಂತೆ ತಾಕೀತು ಮಾಡಿದ್ದಾನೆ. ಮೆಲ್ವಿನ್, “ನನ್ನ ಬಳಿ ಅಷ್ಟೊಂದು ಹಣವಿಲ್ಲ, ಬೇಕಿದ್ದರೆ ₹20 ಲಕ್ಷ ಕೊಡುತ್ತೇನೆ” ಎಂದಾಗ, ಆರೋಪಿಗಳು ₹50 ಲಕ್ಷಕ್ಕೆ ಪಟ್ಟು ಹಿಡಿದು ಎರಡು-ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಕೊನೆಗೆ ಮೆಲ್ವಿನ್ ₹50 ಲಕ್ಷ ಕೊಡಲು ಒಪ್ಪಿದಾಗ, ಆರೋಪಿಗಳು ತಮ್ಮ ಬೇಡಿಕೆಯನ್ನು ₹2.5 ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಮೆಲ್ವಿನ್ ವಿವರಿಸಿದ್ದಾರೆ.

Bengaluru – ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡ ಮೆಲ್ವಿನ್
ಜುಲೈ 22ರಂದು ಆರೋಪಿಗಳು ಫ್ಲ್ಯಾಟ್‌ಗೆ ಚಿಲಕ ಹಾಕಿ ಹೊರ ಹೋಗಿದ್ದರು. ಆಗ ಮೆಲ್ವಿನ್ ಅವರ ಚೀರಾಟ ಕೇಳಿದ ಪಕ್ಕದ ಮನೆಯ ಮಹಿಳೆಯೊಬ್ಬರು ಮಾತನಾಡಿಸಿದ್ದಾರೆ. ಅವರ ಮೂಲಕ ತಮ್ಮ ಸಹೋದರಿಗೆ ಕರೆ ಮಾಡಿ ಅಪಹರಣದ ವಿಷಯ ತಿಳಿಸಿದ್ದಾರೆ. ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
Read this also : Love Dhoka: 50ರ ಅಂಕಲ್ ಗೆ ಹದಿಹರೆಯದ ಯುವತಿಯ ಮೇಲೆ ಲವ್, ಡೇಟ್ ಗೆ ಎಂದು ಕರೆದೊಯ್ದ ಯುವತಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ….!
ಪೊಲೀಸರ ಬರುವಿಕೆ ಅರಿತ ಆರೋಪಿಗಳು ಮೆಲ್ವಿನ್ ಅವರನ್ನು ತುಮಕೂರು ರಸ್ತೆಯ ಮೂಲಕ ಬೇರೆಡೆಗೆ ಸಾಗಿಸುತ್ತಿದ್ದರು. ಅಷ್ಟರಲ್ಲಿ ಅಪಹರಣಕಾರರ ಮೊಬೈಲ್‌ಗೆ ಕರೆ ಬಂದಿದೆ. ಆಗ ಮೆಲ್ವಿನ್ ಜೊತೆ ಮಾತನಾಡಿದ ಅಪರಿಚಿತನೊಬ್ಬ, “ನನಗೆ ಸಿಡೋಪೋನಿಕ್ ಎಫೀಸೋ ಕಾಯಿಲೆ ಇದೆ, ನಿನಗೆ ಯಾರೋ ಕಿಡ್ನಾಪ್ ಮಾಡುತ್ತಿರುವುದಾಗಿ ಅನಿಸುತ್ತಿದೆ ಎಂದು ಪೊಲೀಸರಿಗೆ ಹೇಳುವಂತೆ” ತಾಕೀತು ಮಾಡಿದ್ದಾನೆ. ಅಲ್ಲದೆ, “ನಿನ್ನ ತಂಗಿಗೆ ಹೇಳು, ಇಲ್ಲದಿದ್ದರೆ ನಿನ್ನನ್ನು ಇನ್ನೆರಡು ದಿನಗಳಲ್ಲಿ ಮತ್ತೆ ಅಪಹರಿಸಿ ಸಾಯಿಸುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ.
ನಂತರ, ಯಶವಂತಪುರದ ತಾಜ್ ಹೋಟೆಲ್ ಬಳಿ ಕಾರಿನಿಂದ ಇಳಿಸಿ, ಒಂದು ಕೀ ಪ್ಯಾಡ್ ಮೊಬೈಲ್, ಮೆಲ್ವಿನ್ ಸಿಮ್ ಮತ್ತು ಮನೆಗೆ ಹೋಗಲು ₹1,000 ಹಣ ಕೊಟ್ಟು ಪರಾರಿಯಾಗಿದ್ದಾರೆ. ಮೆಲ್ವಿನ್ ಅಲ್ಲಿಂದ ಹೊರಡುತ್ತಿದ್ದಂತೆಯೇ ಪೊಲೀಸರು ಆಗಮಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Bengaluru – ಮಾಜಿ ಪ್ರಿಯತಮೆಯ ಮಾಸ್ಟರ್‌ಮೈಂಡ್
ಪೊಲೀಸರ ಮಾಹಿತಿ ಪ್ರಕಾರ, ಆರು ವರ್ಷಗಳ ಹಿಂದೆ ಮೆಲ್ವಿನ್ ಮತ್ತು ಮಹಾರಾಷ್ಟ್ರದ ಮಹಿಮಾ ವಾಟ್ ಪ್ರೀತಿಸುತ್ತಿದ್ದರು. ವೈಯಕ್ತಿಕ ಕಾರಣಗಳಿಂದ ಅವರು ಪ್ರತ್ಯೇಕವಾಗಿದ್ದರು. ಪ್ರೀತಿ ವಿಫಲವಾದ ನಂತರ ಮೆಲ್ವಿನ್ ದುಬೈಗೆ ಹೋಗಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಮಾ, ಹಣಕ್ಕಾಗಿ ತನ್ನ ಮಾಜಿ ಪ್ರಿಯತಮನನ್ನು ಅಪಹರಿಸಲು ಸಂಚು ರೂಪಿಸಿದ್ದಳು. ಈ ಕೃತ್ಯಕ್ಕೆ ಆಕೆಗೆ ಸ್ನೇಹಿತ ಶಾಕಿಬ್ ಮತ್ತು ಆತನ ತಂಡ ಸಾಥ್ ನೀಡಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಮಹಿಮಾ ರಾತ್ರೋರಾತ್ರಿ ಕೋರಮಂಗಲದಲ್ಲಿದ್ದ ಮನೆಯಿಂದ ಓಡಿ ಹೋಗಿದ್ದಾಳೆ. ವಿಜಯಪುರ ಜಿಲ್ಲೆಯ ಶಾಕಿಬ್ ಕೂಡ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
