ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರು ಲೋಕಾಯುಕ್ತ ಪೊಲೀಸರು ಎಫ್.ಐ.ಆರ್ ದಾಖಲಿಸಿದೆ. ಇದರ ಜೊತೆಗೆ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ (ED) ದೂರು ನೀಡಿದ್ದಾರೆ. ಅದರಂತೆ ಮೈಸೂರು ಲೋಕಾಯುಕ್ತದಲ್ಲಿ ದಾಖಲಾದ ಎಫ್.ಐ.ಆರ್ ಆಧರಿಸಿ (MUDA case) ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದಿಂದಲೂ ECIR (ಜಾರಿ ಪ್ರಕರಣದ ಮಾಹಿತಿ ವರದಿ) ದಾಖಲಿಸಲಾಗಿದೆ.
ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಮೈಸೂರು ಲೋಕಾಯುಕ್ತ ದಾಖಲು ಮಾಡಿದ ಎಫ್.ಐ.ಆರ್ ನಲ್ಲಿ ಉಲ್ಲೇಖಿಸಲಾದ ಹೆಸರುಗಳ ಮೇಲೆ ED ಪ್ರಕರಣ ದಾಖಲಿಸಿದೆ. ಇಡಿ ದಾಖಲಿಸಿದ ECIR ನಲ್ಲೂ ಸಿಎಂ ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‌ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ ಅಷ್ಟೇಅಲ್ಲದೇ ED ಕೇಸಿನಲ್ಲಿ ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ECIR ಎಂದರೇ ಏನು ಎಂಬ ವಿಚಾರಕ್ಕೆ ಬಂದರೇ ECIR ಪಿ.ಎಂ.ಎಲ್.ಎ ಕಾಯ್ದೆಯಡಿ ದಾಖಲಾಗಿದ್ದು, ಇದು ಪೊಲೀಸರ FIR ಗೆ ಸಮನಾಗಿದೆ. ಜಾರಿ ನಿದೇಶನಾಲಯದ ಅಧಿಕಾರಿಗಳಿಗೆ ವಿಶೇಷ ಅಧಿಕಾರವಿರುತ್ತದೆ. ಸಮನ್ಸ್ ನೀಡಿ ವಿಚಾರಣೆಗೂ ಕರೆಯಬಲ್ಲ ಅಧಿಕಾರ ಜಾರಿ ನಿರ್ದೇಶನಾಲಯಕ್ಕಿದೆ. ಜೊತೆಗೆ ತನಿಖಾ ಹಂತದಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಮಾಡುವ ಅಧಿಕಾರವೂ ED ಗೆ ಇದೆ. ಇದೀಗ ಇಡಿ ಏನು ಮಾಡಬಹುದು ಎಂಬ ವಿಚಾರಕ್ಕೆ ಬಂದರೇ ಸದ್ಯ ಮುಡಾ ಪ್ರಕರಣದ ನಿಮಿತ್ತ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಂಬಂಧ ದಾಖಲೆಗಳನ್ನು ಕಲೆಹಾಕಲಿದೆ. ಜೊತೆಗೆ ದಾಖಲೆಗಳನ್ನು ಇಡಿ ವಶಕ್ಕೆ ಪಡೆಯಲಿದೆ. ಜೊತೆಗೆ ಮುಡಾ ಕಚೇರಿಯ ಮೇಲೂ ಸಹ ಇಡಿ ದಾಳಿ ಮಾಡಲಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಇಲಾಖೆಗಳ ಮೇಲೂ ಸಹ ಇಡಿ ದಾಳಿ ಮಾಡಬಹುದಾಗಿದೆ. ನಾಲ್ವರು ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೆ ಸಹ ಒಳಪಡಿಸಬಹುದಾಗಿದೆ. ಅಗತ್ಯ ಬಿದ್ದರೇ ಸಿದ್ದರಾಮಯ್ಯ ಸೇರಿದಂತೆ ಪ್ರಕರಣದಲ್ಲಿರುವ ಆರೋಪಿಗಳನ್ನು ಸಹ ಬಂಧಿಸಬಹುದಾಗಿದೆ.