ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ರವರೇ ಪೆನ್ ಡ್ರೈವ್ ರೆಡಿ ಮಾಡಿದ್ದು, ಇದಕ್ಕಾಗಿ ಮಂತ್ರಿಗಳ ಟೀಂ ರಚನೆ ಮಾಡಿದ್ದರು ಎಂಬೆಲ್ಲಾ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ದೇವರಾಜೇಗೌಡ ಆರೋಪಗಳಿಗೆ ಡಿ.ಕೆ.ಶಿವಕುಮಾರ್ ಕೌಂಟರ್ ಕೊಟ್ಟಿದ್ದು, ಆತನ ತಲೆ ಕೆಟ್ಟಿದೆ, ಆರೋಪಗಳು ಆಧಾರರಹಿತ, ಆತನ ಆರೋಪಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಪೆನ್ ಡ್ರೈವ್ ಸಿದ್ದ ಮಾಡಿದ್ದು, ಡಿ.ಕೆ.ಶಿವಕುಮಾರ್ ರವರೇ, ಹೆಚ್.ಡಿ.ಕುಮಾರಸ್ವಾಮಿ ರವರು ಇದಕ್ಕೆಲ್ಲಾ ಕಾರಣ, ಕುಮರಸ್ವಾಮಿ ಹಂಚಿದ್ರು ಅಂತಾನೇ ಹೇಳು. ನಿನಗೇನು ಸಮಸ್ಯೆಯಾಗೊಲ್ಲ. ನಿನ್ನನ್ನು ಸೆಕ್ಯೂರ್ ಮಾಡ್ತೀನಿ ಅಂತಾ ಭರವಸೆ ಸಹ ನೀಡಿದ್ದರು ಎಂದು ದೇವರಾಜೇಗೌಡ ಗಂಭೀರ ಆರೋಪಗಳನ್ನು ಮಾಡಿದ್ದರು. ಕಾರ್ತಿಕ್ ನನ್ನು ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್ ಡ್ರೈವ್ ರೆಡಿ ಮಾಡಿದರು. ಈ ಸಂಬಂಧ ನಾಲ್ಕು ಮಂದಿ ಮಂತ್ರಿಗಳ ಕಮಿಟಿ ಮಾಡಿದರು. ಈ ಕಮಿಟಿಯಲ್ಲಿ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಚೆಲುವರಾಯಸ್ವಾಮಿ ಹಾಗೂ ಇನ್ನೊಬ್ಬ ಸಚಿವರು ಇದ್ದಾರೆ. ಈ ನಾಲ್ಕು ಮಂತ್ರಿಗಳು ಈ ಪ್ರಕರಣವನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು ಎಂದು ಆರೋಪ ಮಾಡಿದ್ದರು.
ಇದೀಗ ಈ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದು, ಅವ್ನು ಏನು ಬೇಕಾದರೂ ಮಾತನಾಡಿಕೊಳ್ಳಲಿ, ದೇವರಾಜೇಗೌಡನಿಗೆ ತಲೆ ಕೆಟ್ಟಿದೆ. ನಾನು ಯಾರ ಜೊತೆಯಲ್ಲೂ ಮಾತನಾಡಿಲ್ಲ. ನನ್ನ ಹತ್ತಿರ ಏನೇನಕ್ಕೋ ನೂರಾರು ಜನ ಬರುತ್ತಾರೆ. ಎಲ್ಲರನ್ನೂ ಸ್ಕ್ಯಾನ್ ಮಾಡೋಕೆ ಆಗೊಲ್ಲ ಅಲ್ಲವೇ. ಕೆಲವರು ನನ್ನ ಹೆಸರು ಬಳಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಮಾರ್ಕೆಟ್ ಮಾಡಿಕೊಳ್ಳುತ್ತಿದ್ದಾರೆ. ಏನಾದರೂ ಒಳ್ಳೆಯದು ಇದ್ದರೇ ಹೇಳಿ. ಯಾರು ಯಾರೋ ಹೇಳಿದರೇ ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯ ಎಲ್ಲರೂ ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತಿದ್ದಾರೆ ವಿನಃ ಸಂತ್ರಸ್ತೆಯರ ಬಗ್ಗೆ ಯಾರು ಮಾತನಾಡುತ್ತಿಲ್ಲ ಏತಕ್ಕಾಗಿ, ಈ ವಿಚಾರದಲ್ಲಿ ನಾನು ಹೆಚ್ಚು ಏನು ಮಾತನಾಡೊಲ್ಲ ಎಂದು ಗುಡುಗಿದ್ದಾರೆ.