Crime News- ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ಸಿಸಿ ಕ್ಯಾಮೆರಾ ಡಿವಿಆರ್ ಸಮೇತ (Crime News) ದೋಚಿ ಪರಾರಿಯಾಗಿದ್ದ ಇಬ್ಬರು ಅಂತರ್ ರಾಜ್ಯದ ಕಳ್ಳರನ್ನು ಬಂಧಿಸುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತರ್ ರಾಜ್ಯ ಕಳ್ಳರನ್ನು ಶೀಘ್ರವಾಗಿ ಬಂಧಿಸಿ ಕಳ್ಳತನ ಮಾಡಿರುವ ವಸ್ತುಗಳನ್ನು ಜಪ್ತಿಮಾಡುವಲ್ಲಿ ಯಶಸ್ವಿಯಾಗಿರುವ ಗುಡಿಬಂಡೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.
ಅಕ್ಟೋಬರ್ 2 ಮಂಗಳವಾರ ರಾತ್ರಿ ಸುಮಾರು 1-30 ರ ಸಮಯದಲ್ಲಿ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳನ್ನು ಬೇರೆ ಕಡೆಗೆ ತಿರುಗಿಸಿ, ವೈರ್‌ಗಳನ್ನು ಕಟ್ ಮಾಡಿ ಡಿವಿಆರ್ ಸಮೇತ ಕದ್ದು, ದೇವಾಲಯ ಒಳಗೆ ಬಿರುವನಲ್ಲಿದ್ದ 2.75 ಕೆ.ಜಿ ಬೆಳ್ಳಿ ಕವಚ, 1 ಕೆಜಿ ಬೆಳ್ಳಿಯ ಪೂಜೆ ಸಾಮಾನು,15 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ಹಣ ಕಳವಾಗಿತ್ತು. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಮೊಕ್ಕದಮೆ ಸಂಖ್ಯೆ 153/2024 500: 305,331(4) ಬಿ.ಎನ್. ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಬ್ ಇನ್ಸ್ ಪೆಕ್ಟರ್ ಗಣೇಶ್ ಕೆ ಮತ್ತು ತಂಡ ತನಿಖೆಯನ್ನು ಕೈಗೊಂಡಿದ್ದರು.
ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಇಮಾಮ್ ಖಾಸಿಂ ಮತ್ತು ಚಿಕ್ಕಬಳ್ಳಾಪುರ ಉಪ-ವಿಭಾಗ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್, ಇವರ ಮಾರ್ಗದರ್ಶನದಲ್ಲಿ ಗುಡಿಬಂಡೆ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳಾದ ಗಣೇಶ್ ಕೆ, ರಮೇಶ್ .ಕೆ, ಸಿಬ್ಬಂದಿ ರವರೊನ್ನಳಗೊಂಡ ದಕ್ಷಿಣಮೂರ್ತಿ, ಅರುಣ್ ಸಿ, ಮುರಳಿ ರವರ ಪ್ರತ್ಯೇಕ ತಂಡವನ್ನು ರಚನೆ ಮಾಡಿ ಅಂತರ್ ರಾಜ್ಯ ಕಳ್ಳರನ್ನು ಬಂದಿಸಿದ್ದಾರೆ.
ಈ ತಂಡವು ಅಕ್ಟೋಬರ್14 ರಂದು ಈ ಪ್ರಕರಣದ ಆರೋಪಿಗಳಾದ ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ರುಕಲಪಟ್ನಂ ಗ್ರಾಮದ ಚಾಕಲಿ ಪವನ್ ಕುಮಾರ್ ಮತ್ತು ಆಂಧ್ರಪ್ರದೇಶ, ಕಡಪ ಜಿಲ್ಲೆ ಕೊತ್ತಮಾದರಂ ಗ್ರಾಮದ ನಾಗಲೂರಿ ರಮಣಯ್ಯ ಇಬ್ಬರನ್ನು ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದ ಬಾಲ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲ ಕಳ್ಳತನ ಮಾಡಿದ್ದ ಚಿನ್ನ ಬೆಳ್ಳಿ ಮತ್ತು ಇತರೆ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈಗಾಗಲೇ ಒಂದನೇ ಆರೋಪಿ ಚಾಕಲಿ ಪವನ್ ಕುಮಾರ್ ವಿರುದ್ದ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ, ಕೊರಟಗೆರೆ ಪೊಲೀಸ್ ಠಾಣೆ, ಗಾರಲ್ಲದಿನ್ನೆ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಎರಡನೇ ಆರೋಪಿ ನಾಗಲೂರಿ ರಮಣಯ್ಯ ವಿರುದ್ದ ಗಾರಲ್ಲದಿನ್ನೆ ಪೊಲೀಸ್ ಠಾಣೆ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.