Crime News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದ ನಿವಾಸಿ ಬಾಲಾಜಿ ಸಿಂಗ್ (32) ನಿನ್ನೆ ರಾತ್ರಿ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮ***ಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿನ ಬಗ್ಗೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.

Crime – ಘಟನೆಯ ವಿವರ
ಮೃತ ಬಾಲಾಜಿ ಸಿಂಗ್ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಿಂದೆ ಸ್ವಂತ ಮಿನಿ ಬಸ್, ಕಾರುಗಳನ್ನು ಇಟ್ಟುಕೊಂಡಿದ್ದಲ್ಲದೆ, ಫಿಶ್ ಅಕ್ವೇರಿಯಂ ಅಂಗಡಿಯನ್ನು ನಡೆಸಿ ಉತ್ತಮ ಜೀವನ ನಡೆಸುತ್ತಿದ್ದನು. ಆದರೆ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೀಡಾಗಿ ವಾಹನಗಳನ್ನು ಮಾರಿ, ಬೇರೆಯವರ ಕಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಹೆಂಡತಿ, ಮಗು ಹಾಗೂ ತಾಯಿಯೊಂದಿಗೆ ಸಂತೋಷವಾಗಿಯೇ ಇರುತ್ತಿದ್ದನಂತೆ, ಕಳೆದ ರಾತ್ರಿ ಏನಾಯ್ತೋ ಏನೋ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Crime – ಅನುಮಾನ ವ್ಯಕ್ತಪಡಿಸಿದ ಮೃತನ ಕುಟುಂಬಸ್ಥರು
ಈ ಕುರಿತು ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಪಟ್ಟಣದ ಬೇರೊಬ್ಬ ಯುವತಿಯೊಂದಿಗೆ ಬಾಲಾಜಿಗೆ ಸಂಪರ್ಕವಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ರಾಜಿ ಪಂಚಾಯ್ತಿ ಎಲ್ಲಾ ಮಾಡಿ ಅವಳಿಂದ ದೂರ ಮಾಡಿದ್ದೆವು. ಆದರೆ ಅವಳು ನನ್ನ ಮಗನಿಗೆ ಫೋನ್ ಮಾಡಿ ಕಾಟ ಕೊಡ್ತಾ ಇದ್ದಳು. ಅವಳ ಮೇಲೆ ನಮಗೆ ಅನುಮಾನ ಇದೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ. Read this also : ‘ಮದುವೆಯಾಗು’ ಎಂದಿದ್ದೇ ತಪ್ಪಾಯ್ತಾ? ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಭೀಕರ ಹತ್ಯೆ; ಪ್ರಿಯಕರನ ಕ್ರೌರ್ಯಕ್ಕೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ!

ವಿಷಯ ತಿಳಿದ ಕೂಡಲೇ ಗುಡಿಬಂಡೆ ಪೊಲೀಸ್ ಠಾಣೆಯ ಪಿಎಸ್ಐ ಗಣೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ತನಿಖೆಯ ನಂತರವೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಬೇಕಿದೆ.
