Crime – ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದು ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಹದಿನೈದು ವರ್ಷಗಳಿಂದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನೊಬ್ಬ, ವಿದ್ಯಾರ್ಥಿನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಕೊನೆಗೆ ಅರೆಸ್ಟ್ ಆಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ, ಆತನ ಮತ್ತೊಂದು ಕರಾಳ ಮುಖವೂ ಅನಾವರಣಗೊಂಡಿದ್ದು, ಆತನ ಪತ್ನಿ ಕೂಡ ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ.
Crime – ವಿದ್ಯಾರ್ಥಿನಿ ಜೊತೆ ಪರಾರಿಯಾಗಿದ್ದ ಪ್ರಾಧ್ಯಾಪಕ ಯಾರು?
ದೊಡ್ಡಬಳ್ಳಾಪುರದ ಪ್ರತಿಷ್ಠಿತ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರವೀಣ್ (45) ಈ ಘಟನೆಯ ಕೇಂದ್ರಬಿಂದು. ಈಗಾಗಲೇ ವಿವಾಹಿತರಾಗಿ, ಇಬ್ಬರು ಮಕ್ಕಳಿದ್ದರೂ, ಪ್ರವೀಣ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧದ ಬಗ್ಗೆ ವಿದ್ಯಾರ್ಥಿನಿಯ ಕುಟುಂಬಕ್ಕೆ ತಿಳಿದು, ಆಕೆಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ಗೊತ್ತಾದ ಕೂಡಲೇ ಪ್ರವೀಣ್, ಆಗಸ್ಟ್ 2 ರಂದು ವಿದ್ಯಾರ್ಥಿನಿಯನ್ನ ಕರೆದುಕೊಂಡು ಹೋಗಿದ್ದಾನೆ.
Crime – ದೆಹಲಿಯಿಂದ ನಂಜನಗೂಡಿಗೆ ಪಯಣ!
ಪ್ರವೀಣ್ ಮತ್ತು ಆ ವಿದ್ಯಾರ್ಥಿನಿ ಬೆಂಗಳೂರಿನಿಂದ ಮೊದಲು ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ನಂಜನಗೂಡಿಗೆ ಬಂದು ಲಾಡ್ಜ್ವೊಂದರಲ್ಲಿ ತಂಗಿದ್ದರು. ಇತ್ತ ಪ್ರವೀಣ್ ಪತ್ನಿ ಹಾಗೂ ವಿದ್ಯಾರ್ಥಿನಿಯ ಪೋಷಕರು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಶುರುಮಾಡಿದ ಪೊಲೀಸರು, ಪ್ರವೀಣ್ ನಂಜನಗೂಡಿನಲ್ಲಿ ಇರುವುದನ್ನ ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.
Crime – ಪತ್ನಿ ಮೇಲೆ ವರದಕ್ಷಿಣೆ ಕಿರುಕುಳ ಕೇಸ್
ಇದೇ ಸಮಯದಲ್ಲಿ ಪ್ರಾಧ್ಯಾಪಕ ಪ್ರವೀಣ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಬೆಳಕಿಗೆ ಬಂದಿದೆ. ಪ್ರವೀಣ್ ಪತ್ನಿ ಕೂಡ ತನ್ನ ಪತಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆಯಾಗಿ 10 ವರ್ಷ ಕಳೆದರೂ, ಪ್ರವೀಣ್ ತನ್ನ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಆಕೆಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಕೇಳಿದಾಗ ಪ್ರವೀಣ್ ತನ್ನ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ. Read this also : ವರದಕ್ಷಿಣೆಗಾಗಿ ಅತ್ತೆಯನ್ನು ಕ್ರೂರವಾಗಿ ಥಳಿಸಿದ ಸೊಸೆ: ಉತ್ತರ ಪ್ರದೇಶದ ಈ ವಿಡಿಯೋ ವೈರಲ್…!
Crime – ಸೈಟ್ ಮತ್ತು ಮನೆಗಾಗಿ ಕಿರುಕುಳ
ಪ್ರವೀಣ್ ತಮ್ಮ ಪತ್ನಿಗೆ ತಮ್ಮ ತಂದೆಯಿಂದ ಸೈಟ್ ಹಾಗೂ ಮನೆ ಕಟ್ಟಿಸಿಕೊಡಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ಆಕೆ ನಿರಾಕರಿಸಿದಾಗ, ಪ್ರವೀಣ್ ಹಾಗೂ ಆತನ ಕುಟುಂಬದ ಸದಸ್ಯರಾದ ಪ್ರವೀಣ್ ತಾಯಿ, ಶಾಂತ, ಶೋಭಾ, ನರಸಿಂಹ ಮೂರ್ತಿ ಸೇರಿದಂತೆ ಎಲ್ಲರೂ ಆಕೆಯನ್ನು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, “ವಿಚ್ಛೇದನ ಕೊಡು ಇಲ್ಲವೇ ನಿಮ್ಮ ತಂದೆಯಿಂದ ಚಿನ್ನಾಭರಣಗಳನ್ನು ಪಡೆದುಕೊಂಡು ಬಾ” ಎಂದು ಒತ್ತಾಯಿಸುತ್ತಿದ್ದರು ಎಂದು ಆರೋಪಿಯ ಪತ್ನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸರು ಈ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.