ಸಂಸಾರದಲ್ಲಿನ ಮನಸ್ತಾಪದಿಂದ ಗಂಡನ ಮನೆಯನ್ನು ತೊರೆದು ತವರು ಮನೆ ಸೇರಿದ್ದ ಮೂವರು ಮಕ್ಕಳ ತಾಯಿಯೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. “ಅಕ್ರಮ ಸಂಬಂಧ ಅಥವಾ ಪ್ರೇಮ ಪ್ರಕರಣ” ಈ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಾಫಿನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ.

Crime News ಅಷ್ಟಕ್ಕೂ ಆಗಿದ್ದೇನು?
ಮೃತ ದುರ್ದೈವಿಯನ್ನು ಸಂಧ್ಯಾ (32) ಎಂದು ಗುರುತಿಸಲಾಗಿದೆ. ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಇವರಿಗೆ ಅರೇನೂರಿನಿಂದ 20 ಕಿ.ಮೀ ದೂರದ ಶಿರಗೋಳ ಗ್ರಾಮದ ರವಿ ಎಂಬುವವರೊಂದಿಗೆ ಮದುವೆಯಾಗಿತ್ತು. ದಾಂಪತ್ಯ ಜೀವನದ ಫಲವಾಗಿ ಮೂವರು ಮಕ್ಕಳಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಗಂಡ-ಹೆಂಡತಿ ನಡುವಿನ ಮನಸ್ತಾಪದಿಂದಾಗಿ ಸಂಧ್ಯಾ ಗಂಡನನ್ನು ಬಿಟ್ಟು ಕಳೆದ 3 ವರ್ಷಗಳಿಂದ ಅರೇನೂರಿನ ತಾಯಿ ಮನೆಯಲ್ಲಿ ನೆಲೆಸಿದ್ದರು. ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
Crime – ನಾಪತ್ತೆ ನಾಟಕ ಮತ್ತು ಸಾವಿನ ಸುಳಿವು!
ಕಳೆದ ಕೆಲವು ದಿನಗಳ ಹಿಂದಷ್ಟೇ ಸಂಧ್ಯಾ ದಿಢೀರ್ ನಾಪತ್ತೆಯಾಗಿದ್ದರು. ಮಗಳು ಕಾಣದಿದ್ದಾಗ ಆತಂಕಗೊಂಡ ತಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಆದರೆ, ಸೋಮವಾರ ಸಂಜೆ ತಾಯಿ ಮನೆಗೆ ವಾಪಸ್ ಬಂದಿದ್ದ ಸಂಧ್ಯಾ, “ನಾನು ಸಂಬಂಧಿಕರ ಮನೆಗೆ ಹೋಗಿದ್ದೆ” ಎಂದು ಸಬೂಬು ಹೇಳಿದ್ದರು.
ದುರಂತವೆಂದರೆ, ಮನೆಗೆ ಬಂದ ಮರುದಿನವೇ (ಮಂಗಳವಾರ) ಬೆಳಗ್ಗೆ ಮನೆಯ ಹಿಂಭಾಗ ಬಟ್ಟೆ ತೊಳೆಯುತ್ತಿದ್ದಾಗ ದುಷ್ಕರ್ಮಿಗಳು ಚಾಕುವಿನಿಂದ ಸಂಧ್ಯಾಳ ಕುತ್ತಿಗೆ ಸೀಳಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಪ್ರಾಣಪಕ್ಷಿ ಹಾರಿಹೋಗಿದೆ.
Crime – ಲವ್ವಿ-ಡವ್ವಿ ಶಂಕೆ: ಸಂಬಂಧಿಕನ ಮೇಲೆ ಅನುಮಾನ
ಸಂಧ್ಯಾ ಕೊಲೆಗೆ ಪ್ರೇಮ ಪ್ರಕರಣವೇ (Love Affair) ಕಾರಣ ಎಂಬ ಬಲವಾದ ಅನುಮಾನ ಇದೀಗ ಹುಟ್ಟಿಕೊಂಡಿದೆ. ಸಂಧ್ಯಾ ತನ್ನ ಕುಟುಂಬದ ಹತ್ತಿರದ ಸಂಬಂಧಿಯೋರ್ವನ ಜೊತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಗಂಡನಿಂದ ದೂರವಿದ್ದ ಆಕೆ ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಕುಟುಂಬದ ತೀವ್ರ ವಿರೋಧವಿತ್ತು. Read this also : ಪತ್ನಿಯ ನಿದ್ದೆಗೆ ಭಂಗ ಬರದಂತೆ 40 ನಿಮಿಷ ಪರದೆ ಹಿಡಿದು ಕುಳಿತ ಪತಿ: ಈ ಪ್ರೀತಿಗೆ ಫಿದಾ ಆದ ನೆಟ್ಟಿಗರು!
ಕುಟುಂಬದ ವಿರೋಧದ ನಡುವೆಯೂ ಮಕ್ಕಳನ್ನು ಕರೆದುಕೊಂಡು ಪ್ರಿಯಕರನ ಜೊತೆ ಸಂಧ್ಯಾ ಹೋಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತ ತಂದೆ ದೂರು ನೀಡಿದ್ದರಿಂದ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಆಕೆ ವಾಪಸ್ ಮನೆಗೆ ಬಂದಿರಬಹುದು. ಇದೇ ವಿಚಾರಕ್ಕೆ ರೊಚ್ಚಿಗೆದ್ದ ಪ್ರಿಯಕರನೇ ಈ ಕೃತ್ಯ ಎಸಗಿರಬಹುದಾ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು
ಘಟನೆಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ಜಾಲ ಬೀಸಿದ್ದಾರೆ. ಒಟ್ಟಿನಲ್ಲಿ ಸಂಸಾರದಲ್ಲಿನ ಬಿರುಕು ಹಾಗೂ ದಾರಿ ತಪ್ಪಿದ ಪ್ರೇಮ ಮೂವರು ಮಕ್ಕಳ ತಾಯಿಯನ್ನು ಬಲಿಪಡೆದಿದೆ.
