CPIM – ಬಡವರಿಗೆ ನಿವೇಶನ, ಭೂಮಿ ಕಲ್ಪಿಸುವುದು, ಉದ್ಯೋಗ ಕಲ್ಪಿಸುವುದು, ಶಾಶ್ವತ ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಆಗ್ರಹಿಸಿ ಸಿಪಿಎಂ ಪಕ್ಷದ ವತಿಯಿಂದ ನ.21 ಹಾಗೂ 22 ರಂದು ಬಾಗೇಪಲ್ಲಿಯಲ್ಲಿ (CPIM) ಚಿಕ್ಕಬಳ್ಳಾಪುರ ಜಿಲ್ಲಾ 18 ನೇ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮವನ್ನು ಎಲ್ಲರೂ ಯಶ್ವಸಿಗೊಳಿಸಬೇಕೆಂದು ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಯರಾಮರೆಡ್ಡಿ ಮನವಿ ಮಾಡಿದರು.
ಗುಡಿಬಂಡೆ ಪಟ್ಟಣದಲ್ಲಿ ಸಮ್ಮೇಳನಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿಪಿಐಎಂ ಪಕ್ಷದ18 ನೇ ಜಿಲ್ಲಾ ಸಮ್ಮೇಳನ ಇದೇ ತಿಂಗಳ 21, 22 ರವರೆಗೆ ನಡೆಯಲಿದ್ದು, ಈ ಸಂಬಂಧ ಎಲ್ಲಾ ಕಾರ್ಯಗಳು ಭರದಿಂದ ಸಾಗುತ್ತಿವೆ. ನಮ್ಮದು ಬಡವರ, ಶ್ರಮಿಕರ ಪಕ್ಷವಾಗಿದೆ. ಆದ್ದರಿಂದ ಸಮ್ಮೇಳನದ ಯಶಸ್ಸಿಗೆ ನಿಧಿ ಸಂಗ್ರಹ ಮಾಡುತ್ತಿದ್ದೇವೆ. ಸಿಪಿಎಂ ಪಕ್ಷ ಕಳೆದ 70 ವರ್ಷಗಳಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ, ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ, ಕೂಲಿಕಾರ್ಮಿಕರ, ರೈತರ, ದುಡಿಯುವ ವರ್ಗಗಳ ಪರವಾಗಿ ಚಳುವಳಿ, ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆ ಬೆಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದರೆ ಮತ್ತೊಂದು ಕಡೆ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಈಭಾಗದ ಬಹುತೇಕ ಯುವಕ ಯುವತಿಯರು, ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ ಅವಕಾಶಗಳಿಗಾಗಿ ಪಟ್ಟಣ ಸೇರಿದಂತೆ ನಗರಪ್ರದೇಶಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿಯಿದೆ ಎಂದರು.
ಜೊತೆಗೆ ಈ ಭಾಗದಲ್ಲಿ ಯಾವುದೇ ಜೀವನದಿಗಳಿಲ್ಲ ಅಲ್ಲದೆ ಸತತ ಬರಗಾಲಕ್ಕೆ ತುತ್ತಾಗಿರುವ ಪರಿಣಾಮ ನೀರಾವರಿ ಯೋಜನೆಗಳು ಈ ಭಾಗಕ್ಕೆ ತುಂಬಾನೆ ಅಗತ್ಯವಿದೆ. ಆದರೆ ಈ ಭಾಗದ ಜನಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜೊತೆಗೆ ನಮ್ಮ ಭಾಗಕ್ಕೆ ನ್ಯಾಯಸಮ್ಮತವಾಗಿ ಸಿಗಬೇಕಾಗಿದ್ದ ಕೃಷ್ಣ ನದಿ ನೀರನ್ನು ಈ ಭಾಗಕ್ಕೆ ಹರಿಸಬೇಕು. ಜೊತೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಈ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿಯ ಮುನಿವೆಂಕಟಪ್ಪ, ಸಾವಿತ್ರಮ್ಮ, ತಾಲೂಕು ಸಮಿತಿಯ ವೆಂಕಟರಾಜು, ಆದಿನಾರಾಯಣ, ಲಕ್ಷ್ಮೀನಾರಾಯಣ, ರಮಣ, ದೇವರಾಜು,ಆದಿನಾರಾಯಣಸ್ವಾಮಿ, ಸೋಮಶೇಖರ್, ಶ್ರೀನಿವಾಸ್, ಮೊದಲಾದವರು ಹಾಜರಿದ್ದರು.