Congress Protest – ದಿನನಿತ್ಯದ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.

Congress Protest – ಕೇಂದ್ರ ಸರ್ಕಾರದ ನೀತಿಗಳಿಗೆ ಜನರಿಂದ ತೀವ್ರ ಆಕ್ಷೇಪ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, “ಪ್ರಧಾನಿ ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಜನರಿಗೆ ಇಂದು ಆ 15 ಲಕ್ಷ ಬೇಡ, ಕೇವಲ ಬೆಲೆ ಏರಿಕೆಯನ್ನು ನಿಯಂತ್ರಿಸಿದರೆ ಸಾಕು ಎನ್ನುವಂತಾಗಿದೆ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ,” ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಿಜವಾಗಿಯೂ ಬೆಲೆ ಏರಿಕೆಗೆ ಕಾರಣ ಕೇಂದ್ರದ ಬಿಜೆಪಿ ಸರ್ಕಾರ. ಅವರಿಗೆ ನಿಜವಾದ ನೈತಿಕತೆ ಇದ್ದರೆ, ಪ್ರಧಾನಿ ಮೋದಿ ಅವರ ಮುಂದೆ ಹೋಗಿ ಬೆಲೆ ಏರಿಕೆ ನಿಲ್ಲಿಸಿ ಮತ್ತು ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣವನ್ನು ಕೊಡಿ ಎಂದು ಪ್ರತಿಭಟನೆ ಮಾಡಲಿ,” ಎಂದು ಕೇಶವರೆಡ್ಡಿ ಸವಾಲು ಹಾಕಿದರು.

Congress Protest – ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಇನ್ನೂ ರಾಜ್ಯ ಬಿಜೆಪಿ ನಾಯಕ ವಿಜಯೇಂದ್ರ ಅವರು ತಮ್ಮ ನಾಯಕತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರತಿಭಟನೆಗಳು ಜನರ ಹಿತಕ್ಕಾಗಿ ಅಲ್ಲ, ಬದಲಿಗೆ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಎಂದು ಅವರು ಟೀಕಿಸಿದರು. ಅಲ್ಲದೆ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಏಪ್ರಿಲ್ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜನರಿಗೆ ಸುಳ್ಳು ಭರವಸೆ ನೀಡಿದ ಬಿಜೆಪಿ: ಲಕ್ಷ್ಮೀನಾರಾಯಣ
ಬಳಿಕ ಕಾಂಗ್ರೇಸ್ ಮುಖಂಡ ಲಕ್ಷ್ಮೀನಾರಾಯಣ ಮಾತನಾಡಿ, ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ ಯನ್ನು ಜನರ ಮೇಲೆ ಹಾಕಿದೆ. ಜನವಿರೋಧಿ, ರೈತ ವಿರೋಧಿ ಸೇರಿದಂತೆ ಹಲವು ರೀತಿಯ ಕಾನೂನುಗಳನ್ನು ತಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್‍ನ ಅಬಕಾರಿ ಸುಂಕವನ್ನು ರೂ.2 ಹೆಚ್ಚಳ ಮಾಡುವುದರ ಮೂಲಕ, ಅಡುಗೆ ಅನಿಲ ದರ ಹೆಚ್ಚಿಸುವ ಮೂಲಕ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ. ತೈಲ ದರದಿಂದ ಹಿಡಿದು ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಜೀವನ ನಡೆಸುವುದು ದುಸ್ಥರವಾಗಿದೆ.
Read this also : Dr K Sudhakar – ರಾಜ್ಯ ಸರ್ಕಾರ ಜನತೆಗೆ ಸ್ವರ್ಗ ತೋರ್ಸ್ತೀನಿ ಅಂತಾ ನರಕ ತೋರ್ಸ್ತಿದೆ: ಡಾ.ಕೆ.ಸುಧಾಕರ್
ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹಾಗೂ ನಿರುದ್ಯೋಗ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುತ್ತಿದೆ. ಇದನ್ನು ಸಹಿಸದ ಬಿಜೆಪಿಯವರು ಕಾಂಗ್ರೇಸ್ ಪಕ್ಷಕ್ಕೆ ಕಪ್ಪು ಚುಕ್ಕೆ ತರಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು ಆರೋಪಿಸಿದರು.
Congress Protest – ಪ್ರತಿಭಟನೆಯಲ್ಲಿ ಭಾಗವಹಿಸಿದವರು
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಕಾಂಗ್ರೇಸ್ ಪಕ್ದದ ಹಿರಿಯ ಮುಖಂಡರಾದ ರಘುನಾಥರೆಡ್ಡಿ, ಕೃಷ್ಣೆಗೌಡ, ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್, ಯೂತ್ ಕಾಂಗ್ರೇಸ್ ಮುಖಂಡರಾದ ನವೀನ್, ಅಂಬರೀಶ್, ಪಪಂ ಅಧ್ಯಕ್ಷ ವಿಕಾಸ್, ಕಾಂಗ್ರೇಸ್ ಪಕ್ಷದ ಮುಖಂಡರಾದ ರಿಯಾಜ್, ಇಸ್ಮಾಯಿಲ್ ಆಜಾದ್ ಬಾಬು, ಪ್ರಕಾಶ್, ನಯಾಜ್ ಸೇರಿದಂತೆ ಹಲವರು ಹಾಜರಿದ್ದರು.