ಗುಡಿಬಂಡೆ: ಜು.17 ರಂದು ನಡೆಯಲಿರುವ ಮೊಹರಾಂ ಹಬ್ಬವನ್ನು (Moharam Celebration) ಯಾವುದೇ ಅಹಿತಕರ ಘಟನೆಗಳು ನಡೆಯಲು ಆಸ್ಪದ ನೀಡದಂತೆ ಶಾಂತಿಯುತವಾಗಿ ಆಚರಣೆ ಮಾಡಬೇಕು, ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು, ಕಾನೂನು ಪಾಲನೆ ಮಾಡುವ ಮೂಲಕ ಮೊಹಾರಂ ಹಬ್ಬವನ್ನು ಆಚರಿಸಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಾಂ ಹಬ್ಬದ ಆಚರಣೆ ಸಂಬಂಧ ಆಯೋಜಿಸಿದ್ದ ಮೊಹರಾಂ ಶಾಂತಿ (Moharam Celebration) ಸಭೆಯಲ್ಲಿ ಮಾತನಾಡಿದ ಅವರು, ಮೊಹರಾಂ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಆಚರಿಸಲು ಹಾಗೂ ಯಾವುದೇ ಗಾಳಿಮಾತು ವದಂತಿಗಳಿಗೆ ಕಿವಿಗೊಡದೆ ಎಲ್ಲಾ ಸಮುದಾಯದವರು ಪರಸ್ಪರ ವಿಶ್ವಾಸದಿಂದ ವರ್ತಿಸಬೇಕು. ಗುಡಿಬಂಡೆ ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಗಲಭೆಗಳು ನಡೆಯದಂತೆ ಮೊಹರಾಂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಭಾರಿಯೂ ಸಹ ಆಯೋಜಕರು ಯಾವುದೇ ರೀತಿಯ ಕಿಡಿಗೇಡಿಗಳಿಗೆ ಗಲಬೆ ಮಾಡಲು ಅವಕಾಶ ನೀಡಬಾರದು. ಸಮಾಜದಲ್ಲಿ ಶಾಂತಿ ಕದಡುವಂತಹ ಕೆಲಸ ಮಾಡಲು ಕೆಲ ಕಿಡಿಗೇಡಿಗಳು ಇಂತಹ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಕುಡಿಯುವುದು, ಡ್ರಗ್ಸ್ ಸೇವನೆ ಮಾಡಿ ಗಲಾಟೆ ಮಾಡಲು ಬರುತ್ತಾರೆ. ಅಂತಹವರ ವಿರುದ್ದ ಕೂಡಲೇ ನಮ್ಮ ಪೊಲೀಸರಿಗೆ ಮಾಹಿತಿ ನೀಡಬೇಕು. ಹಿಂದೂ ಮುಸ್ಲೀಂರ ಭಾವೈಕ್ಯತೆ ಸಾರುವಂತಹ ಈ ಮೊಹರಾಂ ಹಬ್ಬವನ್ನು (Moharam Celebration) ಶಾಂತಿಯುತವಾಗಿ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಿ ಎಂದರು.
ಬಳಿಕ ಪೊಲೀಸ್ ಉಪನಿರೀಕ್ಷಕ ಗಣೇಶ್ ಮಾತನಾಡಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಲಭೆ ಮಾಡುವುದು ಅಪರಾಧವಾಗಿದ್ದು, ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ 112 ಸೇವೆಯನ್ನು ತರಲಾಗಿದೆ. ತಮ್ಮ ಸುತ್ತಮುತ್ತಲಿನಲ್ಲಿ ಅಥವಾ ತಮ್ಮದೇ ಆದ ಸಮಸ್ಯೆಗಳ ಬಗ್ಗೆ ಈ ಸಂಖ್ಯೆಗೆ ಕರೆ ಮಾಡಿದರೇ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಕೇವಲ 17 ನಿಮಿಷದಲ್ಲಿ ನಿಮ್ಮ ಬಳಿಗೆ ಪೊಲೀಸರು ಬರುತ್ತಾರೆ. ಬಳಿಕ ತಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಈ ಸೇವೆಯನ್ನು ಜನರು ಬಳಸಿಕೊಳ್ಳಬೇಕು. ತಾಲೂಕಿನಲ್ಲಿ ಜೂಜು, ಮಟ್ಕಾ ಸೇರಿದಂತೆ ಕಾನೂನಿನ ರೀತ್ಯ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ಈ ವೇಳೆ (Moharam Celebration) ಗುಡಿಬಂಡೆ ಪೊಲೀಸ್ ಉಪನಿರೀಕ್ಷಕ ರಮೇಶ್, ಕೆಡಿಪಿ ಸದಸ್ಯ ರಿಯಾಜ್ ಪಾಷ, ಉರ್ದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹಮದ್ ನಾಸಿರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಕಾಬುಲ್ ಹಸನ್, ಅಬ್ದುಲ್ ವಹಾಬ್ ಬಡ್ಡು, ಷಫಿಉಲ್ಲಾ, ಡಿ.ಎಸ್.ಎಸ್.ಮಂಜುನಾಥ್, ಫಯಾಜ್, ಯಾರಲಿ, ಜಾವೇದ್ ಸೇರಿದಂತೆ ಹಲವರು ಇದ್ದರು.