Chikkaballapura – ಪ್ರೇಯಸಿ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಎಂದು ಗುರುತಿಸಲಾಗಿದೆ.

Chikkaballapura – ಘಟನೆಯ ವಿವರ
ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಲೈಡ್ ಸೈನ್ಸ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಮೊಹಮ್ಮದ್ ಶಬ್ಬೀರ್, ಸೆಪ್ಟೆಂಬರ್ 7ರಂದು ಬೆಳಗ್ಗೆ ತನ್ನ ಹಾಸ್ಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರೂಮಿನ ಕಿಟಕಿಗೆ ಟವಲ್ ಕಟ್ಟಿ, ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೇರೇಸಂದ್ರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ, ಶಬ್ಬೀರ್‌ನ ಕೋಣೆಯಲ್ಲಿ ಒಂದು ಡೆತ್‌ನೋಟ್ ಲಭ್ಯವಾಗಿದೆ. Read this also : ಡ್ಯಾಂನಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ ಮಹಿಳೆ: ಸಮಯ ಪ್ರಜ್ಞೆಯಿಂದ ಜೀವ ಉಳಿಸಿದ ಯುವಕರು…!

Chikkaballapura – ಡೆತ್ ನೋಟ್‌ನಲ್ಲಿ ಪ್ರೇಮ ಸಂದೇಶ
ಮೃತ ವಿದ್ಯಾರ್ಥಿ ಬರೆದ ಡೆತ್ ನೋಟ್‌ನಲ್ಲಿ, “I didn’t stop anything until. I always love you forever, Athiti You are my first and you are My last” ಎಂದು ಬರೆಯಲಾಗಿದೆ. ಪೊಲೀಸರು ಈ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಮೃತ ಶಬ್ಬೀರ್ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಹುಡುಗಿ ಕಳೆದ ಕೆಲವು ದಿನಗಳಿಂದ ಶಬ್ಬೀರ್‌ನ ದೂರವಾಣಿ ಸಂಖ್ಯೆಯನ್ನು ನಿರ್ಬಂಧಿಸಿ (ಬ್ಲಾಕ್ ಮಾಡಿ) ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಮನನೊಂದ ಶಬ್ಬೀರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಪೇರೇಸಂದ್ರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
