ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಹಾಲಿ ಸಂಸದ ಡಾ.ಕೆ.ಸುಧಾಕರ್ ರವರು ಕೋಚಿಮುಲ್ (Kochimul) ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ (Chimul) ಸ್ಥಾಪಿಸಿದ್ದರು. ಈ ಆದೇಶವನ್ನು ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ರದ್ದು ಮಾಡಿತ್ತು. ಈ ಸಂಬಂಧ ಹೈಕೋರ್ಟ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿದ್ದ ಆದೇಶವನ್ನು ಮರುಸ್ಥಾಪನೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಈ ಕುರಿತು ಸಂಸದ ಡಾ.ಕೆ.ಸುಧಾಕರ್ ರಿಯಾಕ್ಟ್ ಆಗಿದ್ದು, ಇದು ಸತ್ಯಕ್ಕೆ ಸಂದ ಜಯ ಎಂದು ತಿಳಿಸಿದ್ದಾರೆ.
ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿದ್ದ ಆದೇಶವನ್ನ ಮರುಸ್ಥಾಪನೆ ಮಾಡುವಂತೆ ಮಾನ್ಯ ಹೈಕೋರ್ಟ್ ತೀರ್ಪು ನೀಡಿದ್ದು, ಇದು ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲೆಯ ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ನಮ್ಮ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಲು ಪ್ರತ್ಯೇಕ ಹಾಲು ಒಕ್ಕೂಟ ಅಗತ್ಯವಿದೆ ಎಂದು ಹೋರಾಟ ಮಾಡಿ, ಅಂದಿನ ಮುಖ್ಯಮಂತ್ರಿಗಳಾದ ಶ್ರೀ Basavaraj Bommai ಹಾಗೂ ಸಂಪುಟದ ಸದಸ್ಯರನ್ನು ಮನವೊಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ದ್ವೇಷದ ರಾಜಕಾರಣಕ್ಕಾಗಿ, ನನ್ನ ಮೇಲಿನ ಸೇಡಿಗಾಗಿ ಬಿಜೆಪಿ ಸರ್ಕಾರದ ಆದೇಶವನ್ನು ಏಕಾಏಕಿ ರದ್ದು ಮಾಡಿ ಜಿಲ್ಲೆಯ ರೈತರ ಹಕ್ಕು ಕಸಿದುಕೊಳ್ಳುವ ಪಾಪದ ಕೆಲಸ ಮಾಡಿತ್ತು.
‘ಬೆಟ್ಟ ಅಗೆದು ಇಲಿ ಹಿಡಿದರು’ ಎನ್ನುವ ಹಾಗೆ ರಾಜಕೀಯ ಸ್ವಾರ್ಥಕ್ಕಾಗಿ, ದ್ವೇಷ ರಾಜಕಾರಣಕ್ಕಾಗಿ 17 ತಿಂಗಳ ಹಿಂದೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಅದೇಶವನ್ನ ರದ್ದು ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ನ್ಯಾಯಾಲಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕೋಚಿಮುಲ್ ಹಾಲು ಒಕ್ಕೂಟವನ್ನು ವಿಭಜನೆ ಮಾಡಿದ್ದ ಆದೇಶವೇ ಸರಿ ಇದೆ ಎಂದು ಒಪ್ಪಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಈ ದ್ವಂದ್ವ ನೀತಿಯಿಂದ, ಎಡಬಿಡಂಗಿ ನಡೆಯಿಂದ 17 ತಿಂಗಳು ಅನಗತ್ಯವಾಗಿ ವ್ಯರ್ಥವಾಗಿದೆ. ಕೆಲವೇ ಕೆಲವು ನಾಯಕರ ಸ್ವಾರ್ಥ ರಾಜಕಾರಣಕ್ಕೆ 17 ತಿಂಗಳುಗಳ ಕಾಲ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ರೈತರಿಗಾದ ಈ ನಷ್ಟಕ್ಕೆ ಯಾರು ಹೊಣೆ?
ಡಾ.ಸುಧಾಕರ್ ರವರ ಸೋಷಿಯಲ್ ಮಿಡಿಯಾ ಪೋಸ್ಟ್ ಇಲ್ಲಿದೆ ನೋಡಿ: Click Here
ಇಂದಿನ ಕೋರ್ಟ್ ತೀರ್ಪು ಕಾಂಗ್ರೆಸ್ ನಾಯಕರಿಗೆ ಕಪಾಳ ಮೋಕ್ಷ ಮಾಡಿದ್ದು, ಇನ್ನು ಮುಂದಾದರೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡದೆ ಜನಪರವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ, ನೀತಿ ಪಾಠ ಹೇಳುವ ಕಾಂಗ್ರೆಸ್ ನಾಯಕರು ಕೋಚಿಮುಲ್ ಆಡಳಿತ ಮಂಡಳಿಯ ಅವಧಿಯು 2024ರ ಮೇ 12ಕ್ಕೆ ಮುಕ್ತಾಯವಾಗಿದ್ದರೂ ಇನ್ನೂ ಚುನಾವಣೆ ನಡೆಸಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಗೆ ಕೋರ್ಟ್ ತೀರ್ಪು ನೀಡಿದ್ದು, ಆಡಳಿತ ಮಂಡಳಿ ರಚನೆಗಾಗಿ 90 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು ಎಂದು ಜೂಲೈ 17ರಂದು ಹೈಕೋರ್ಟ್ ಆದೇಶಿಸಿತ್ತು.
ಅಕ್ರಮ ನೇಮಕಾತಿ, ಭ್ರಷ್ಟಾಚಾರದ ಮೂಲಕ ರೈತರ ಹಣ ಲೂಟಿ ಮಾಡಲು ಚುನಾವಣೆ ನಡೆಸದೆ ಅಧಿಕಾರಕ್ಕೆ ಅಂಟಿಕೊಂಡಿರುವ ಕಾಂಗ್ರೆಸ್ ನಾಯಕರು, ಈ ಕೂಡಲೇ ಹಾಲು ಒಕ್ಕೂಟದ ವಿಭಜನೆಯ ಪ್ರಕ್ರಿಯೆ ಆರಂಭಿಸಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.