ಗುಡಿಬಂಡೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಪರಿಷತ್ ನ 110 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಕವಿಗೋಷ್ಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಕವಿಗಳು ಹಾಗೂ ವಿದ್ಯಾರ್ಥಿಗಳು ಕನ್ನಡ ಕವನಗಳನ್ನು ವಾಚಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಂತಹ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪ ರವರಿಗೆ ಕಸಾಪ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕಸಾಪ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಸಾಪ ತಾಲೂಕು ಸಮ್ಮೇಳನಾಧ್ಯಕ್ಷ ಸ.ನ.ನಾಗೇಂದ್ರ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಏಕೈಕ ಸಂಘಟನೆ ಎಂದರೇ ಅದು ಕನ್ನಡ ಸಾಹಿತ್ಯ ಪರಿಷತ್ ಎಂದು ಹೇಳಬಹುದಾಗಿದೆ. ಈ ಸಾಹಿತ್ಯ ಪರಿಷತ್ ಆರಂಭವಾಗಿದ್ದು, ನಮ್ಮ ಭಾಗದ ಅಂದರೇ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್.ಎಂ.ವಿ.ವಿಶ್ವೇಶ್ವರಯ್ಯ ರವರಿಂದ ಎನ್ನುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಪಸರಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಅನ್ನು ಕಟ್ಟಲಾಯಿತು. ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕು ಆಂಧ್ರದ ಗಡಿ ಭಾಗದಲ್ಲಿದ್ದರೂ ತೆಲುಗಿನ ಪ್ರಾಬಲ್ಯವಿದ್ದರೂ ಸಹ ಕನ್ನಡ ಭಾಷೆ ಹಾಗೂ ಕರ್ನಾಟಕದ ಶಕ್ತಿಯನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಈ ಭಾಗದಿಂದ ಅನೇಕ ಕವಿಗಳು, ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಬಳಿಕ ಉಪನ್ಯಾಸಕ ಪ್ರೊ.ನಯಾಜ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಬಂದಂತಹ ಹಾದಿಯನ್ನು ವಿವರವಾಗಿ ತಿಳಿಸಿದರು. ಸಣ್ಣದಾಗಿ ಆರಂಭವಾದ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್ ನ ಮೂಲ ಆಶಯ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದಾಗಿದೆಯೇ ವಿನಃ ದೊಡ್ಡ ಕಟ್ಟಡಗಳನ್ನು ಕಟ್ಟಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಲ್ಲ. ಜನಪದ ಸೇರಿದಂತೆ ಲಿಖಿತ ಹಾಗೂ ಆಕರಗಳ ಗ್ರಂಥಗಳನ್ನು ಸಂರಕ್ಷಣೆ ಮಾಡುವಂತಹದು ಕನ್ನಡ ಸಾಹಿತ್ಯ ಪರಿಷತ್ ನ ಪ್ರಮುಖ ಉದ್ದೇಶ ಹಾಗೂ ಆಶಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಉಗಮವಾಗಿದೆ. ಆಗಿನ ಕಾಲದ ರಾಜ ತನ್ನ ಭಾಷೆಗಾಗಿ ಒಂದು ಪ್ರಾತಿನಿಧಿಕ ಸಂಸ್ಥೆ ಆರಂಭಿಸಿದ ಏಕೈಕ ರಾಜ್ಯ ಕರ್ನಾಟಕ ಬಿಟ್ಟರೇ ವಿಶ್ವದ ಯಾವುದೇ ಭಾಗದಲ್ಲಿ ಇಲ್ಲ ಎಂದೇ ಹೇಳಬಹುದಾಗಿದೆ. ಆದ್ದರಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರು ಸೈನಿಕರಂತೆ ಹೋರಾಟ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷೆ ಅನುರಾಧ ಆನಂದ್, ಪತ್ರಕರ್ತರ ಸಂಘದ ಬಾಲಾಜಿ, ಕನ್ನಡ ಸೇನೆಯ ಅಂಬರೀಶ್, ಉಪನ್ಯಾಸಕರಾದ ಪ್ರೊ.ಕೃಷ್ಣಪ್ಪ, ಪ್ರಭಾಕರ್, ಕರುನಾಡು ಸಾಹಿತ್ಯ ಪರಿಷತ್ ನ ಫಯಾಜ್, ಶ್ರೀನಿವಾಸ್ ಗಾಂಧಿ, ಸಾಧು ಪುರಷೋತ್ತಮ್, ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು