ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿದ್ದು, ಈ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ತುಂಬಾನೆ ಕಷ್ಟ ಪಡುತ್ತಿದೆ ಎನ್ನಬಹುದಾಗಿದೆ. ಪರಿಶಿಷ್ಟರ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಸಹ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು, ಈ ಕುರಿತು ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ದ ಕಿಡಿಕಾರುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ನಡೆಯುವುದಕ್ಕೂ ಮುನ್ನಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, (BY Vijayendra) ರಾಜ್ಯ ಸರ್ಕಾರ ಎಸ್ಟಿ ಅಭಿವೃದ್ದಿ ನಿಗಮ, ಎಸ್.ಇ.ಎಸ್.ಪಿ-ಟಿ.ಎಸ್.ಪಿ ಯೋಜನೆಗಳಲ್ಲಿ ಮೀಸಲಿಟ್ಟಂತಹ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ದಲಿತರ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿದೆ. ಈ ಹಗರಣಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ರೂಪದ ಹೋರಾಟ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ದಲಿತರಿಗೆ ಮೀಸಲಿಟ್ಟ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಾಗಿ 24500 ಕೋಟಿಯಷ್ಟು ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ದೆಹಲಿಯಿಂದ ಪತ್ರ ಬಂದಿದ್ದು, ಸರ್ಕಾರ ಅದಕ್ಕೆ ಉತ್ತರ ಕೊಡಬೇಕಿದೆ ಎಂದರು.
ಇನ್ನೂ ರಾಜ್ಯ ಸರ್ಕಾರ ನಾವು ದಲಿತರ ಪರ, ದಲಿತರನ್ನು ಉದ್ದಾರ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಸದ್ಯ ದಲಿತರ ಅಭಿವೃದ್ದಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ಈ ಕುರಿತು ಕಾಂಗ್ರೇಸ್ ನಾಯಕರು ದಲಿತರ ಹಣವನ್ನು ದಲಿತರಿಗೆ ಬಳಸಿಕೊಂಡಿದ್ದೇವೆ. ದುರುಪಯೋಗ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ದಲಿತರ ಅಭಿವೃದ್ದಿಯ ಹಣವನ್ನು ಗ್ಯಾರಂಟಿಗಳಿಗೆ ಬಳಸುವುದು ಸರಿಯಲ್ಲ. ಈ ಸಂಬಂಧ ಸದನದ ಒಳಗೆ ಹಾಗೂ ಹೊರಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ. ಸಿಎಂ ರವರು ತಮ್ಮನ್ನು ಅಹಿಂದ ನಾಯಕರು ಎಂದು ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಅವರು ಮಾಡೋದು ಮಾತ್ರ ಅದಕ್ಕೆ ತದ್ವಿರುದ್ದ ಎಂದು ಆಕ್ರೋಷ ಹೊರಹಾಕಿದ್ದಾರೆ.