“ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವುದನ್ನು ಬಿಟ್ಟು, ಬಡವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ,” ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ನಡೆದ (BJP Protest) ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಬೆಂಬಲ ಸೂಚಿಸಿದರು.
ನಿರ್ಮಾಣ ಹಂತದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಎದುರಾಗಿರುವ ‘ವಾಸಯೋಗ್ಯ ಪ್ರಮಾಣಪತ್ರ’ (Occupancy Certificate – OC) ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸಾವಿರಾರು ಗುತ್ತಿಗೆದಾರರು ಬೀದಿಗಿಳಿದಿದ್ದರು.
BJP Protest – ‘ಸಂವಹನವಲ್ಲ, ಇದು ವಸೂಲಿ ಬಾಜಿ’: ಡಾ. ಸಿ.ಎನ್. ಅಶ್ವತ್ಥನಾರಾಯಣ ವಾಗ್ದಾಳಿ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಸುಪ್ರೀಂ ಕೋರ್ಟ್ ನಿಯಮದ ಹೆಸರಿನಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮನೆ ಕಟ್ಟಿಕೊಳ್ಳುವ ಜನರಿಗೆ ಕರೆಂಟ್ ನೀಡಲು ಅನಗತ್ಯ ಷರತ್ತುಗಳನ್ನು ಹೇರಿ ಜನರ ಜೀವ ಹಿಂಡುತ್ತಿದ್ದಾರೆ. ಇದು ಜನಪರ ಸರ್ಕಾರವೋ ಅಥವಾ ಜನರ ಮೇಲೆ ಸವಾರಿ ಮಾಡುವ ಸರ್ಕಾರವೋ?” ಎಂದು ಪ್ರಶ್ನಿಸಿದರು.

ಲಕ್ಷಾಂತರ ಗ್ರಾಹಕರ ಬದುಕು ಅತಂತ್ರ
ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಮಾತನಾಡಿ, “ರಾಜ್ಯಾದ್ಯಂತ ಲಕ್ಷಾಂತರ ಜನರು ಬ್ಯಾಂಕ್ ಸಾಲ ಪಡೆದು ಮನೆ ಕಟ್ಟುತ್ತಿದ್ದಾರೆ. 2025ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ತಾತ್ಕಾಲಿಕ ಸಂಪರ್ಕ ಹೊಂದಿರುವ ಕಟ್ಟಡಗಳಿಗೆ ಒ.ಸಿ. ಕಡ್ಡಾಯಗೊಳಿಸಿದರೆ ಸಾಮಾನ್ಯ ಜನರಿಗೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟ ಎದುರಾಗುತ್ತದೆ. (BJP Protest) ಸರ್ಕಾರ ತಕ್ಷಣವೇ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿ, ವಿನಾಯಿತಿ ನೀಡಬೇಕು,” ಎಂದು ಒತ್ತಾಯಿಸಿದರು.
“ಪ್ರತಿಭಟನಾಕಾರರು ಉಚಿತ ಬಸ್ ಅಥವಾ ಹಣ ಕೇಳುತ್ತಿಲ್ಲ; ಕೆಲಸ ಮಾಡಲು ಅವಕಾಶ ಕೊಡಿ ಎನ್ನುತ್ತಿದ್ದಾರೆ. ಓಸಿ, ಸಿಸಿ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವುದು ಯಾವ ನ್ಯಾಯ?” — ಎನ್. ರವಿಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು ಇಲ್ಲಿವೆ:
ವಿದ್ಯುತ್ ಗುತ್ತಿಗೆದಾರರು ಸರ್ಕಾರದ ಮುಂದೆ (BJP Protest) ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ:
- ಒನ್ ಟೈಮ್ ಸೆಟಲ್ಮೆಂಟ್: ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಒಂದು ಬಾರಿ ವಿನಾಯಿತಿ ನೀಡಬೇಕು.
- ಸುಪ್ರೀಂ ಕೋರ್ಟ್ ನೆಪ ಬೇಡ: ನ್ಯಾಯಾಲಯದ ಆದೇಶ ತೋರಿಸಿ ವಿದ್ಯುತ್ ಸಂಪರ್ಕ ನಿಲ್ಲಿಸುವುದನ್ನು ತಡೆಯಬೇಕು.
- ಎಂ.ಎಸ್.ಎಂ.ಇ ರಕ್ಷಣೆ: ಸಣ್ಣ ಕೈಗಾರಿಕೆಗಳಿಗೆ (MSME) ಓಸಿಯಿಂದ ವಿನಾಯಿತಿ ನೀಡಬೇಕು.
- ಗುತ್ತಿಗೆದಾರರ ಹಿತರಕ್ಷಣೆ: ಮನೆ ಮಾಲೀಕರು ಮತ್ತು ಗುತ್ತಿಗೆದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.
ಹೋರಾಟಕ್ಕೆ ದನಿಗೂಡಿಸಿದ ನಾಯಕರು
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, (BJP Protest) ಶಾಸಕ ಸಿ.ಕೆ. ರಾಮಮೂರ್ತಿ, ಆಮ್ ಆದ್ಮಿ ಪಾರ್ಟಿಯ ರವಿಕೃಷ್ಣಾ ರೆಡ್ಡಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ಚಂದ್ರಬಾಬು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸುವುದಾಗಿ ನಾಯಕರು ಭರವಸೆ ನೀಡಿದ್ದಾರೆ.
