Dr K Sudhakar – ಕಳೆದೆರಡು ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುತ್ತಿಗೆ ಚಾಲಕ ಬಾಬು ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಇದು ರಾಜಕೀಯ ದುರುದ್ದೇಶವೇ ಹೊರತು ಬೇರೆ ಏನೂ ಅಲ್ಲ, ಕೂಡಲೇ ಅವರ ಹೆಸರನ್ನು ತೆಗೆಯಬೇಕೆಂದು ಬಿಜೆಪಿ-ಜೆಡಿಎಸ್ ಮೈತ್ರಿ ಮುಖಂಡ ಮಂಜುನಾಥರೆಡ್ಡಿ ಆಗ್ರಹಿಸಿದರು.
Dr K Sudhakar – ಎಫ್.ಐ.ಆರ್ ನಲ್ಲಿ ಎ1 ಆರೋಪಿ ಮಾಡಿದ ಸಂಸದರ ಹೆಸರನ್ನು ತೆಗೆಯುವಂತೆ ಆಗ್ರಹ
ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಕೆ.ಸುಧಾಕರ್ ಯುವಸೇನೆ ಹಾಗೂ ಸುಧಾಕರ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಫುರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಬು ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಾಬು ರವರು ಡೆತ್ ನೋಟ್ ಒಂದನ್ನು ಬರೆದಿದ್ದು, ಅದರಲ್ಲಿ ಸಂಸದ ಡಾ.ಕೆ.ಸುಧಾಕರ್ ಹಾಗೂ ಇನ್ನಿಬ್ಬರ ಹೆಸರುಗಳನ್ನು ಬರೆದಿದ್ದಾರೆ. ಆದರೆ ಡಾ.ಸುಧಾಕರ್ ರವರಿಗೆ ಬಾಬು ಯಾರು ಎಂದು ತಿಳಿದೇ ಇಲ್ಲ. ಯಾರೋ ಮಾಡಿದ ಕೆಲಸಕ್ಕಾಗಿ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ನಮೂದಿಸಲಾಗಿದೆ.
ಇದು ರಾಜಕೀಯ ದುರುದ್ದೇಶವೇ ವಿನಃ ಬೇರೆ ಏನೂ ಅಲ್ಲ. ಸಂಸದರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನು ಸಹಿಸದೇ ಕಾಂಗ್ರೇಸ್ ನಾಯಕರುಗಳು ಅವರ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕುತಂತ್ರದಿಂದ ಅವರ ಮೇಲೆ ಎಫ್.ಐ.ಆರ್ ದಾಖಲು ಮಾಡಿಸಿದ್ದಾರೆ. ಬಾಬು ಅವರ ಮರಣ ನಿಜಕ್ಕೂ ದುರಂತವಾಗಿದೆ. ತನಿಖೆ ನಡೆಸದೇ ಈ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಜಿಲ್ಲಾ ವರಿಷ್ಠಾಧಿಕಾರಿಗಳು ಕೂಡಲೇ ಡಾ.ಕೆ.ಸುಧಾಕರ್ ರವರ ಹೆಸರನ್ನು ಎಫ್.ಐ.ಆರ್. ನಿಂದ ತೆಗೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Dr K Sudhakar – ಎಫ್.ಐ.ಆರ್ ನಲ್ಲಿ ಸುಧಾಕರ್ ಹೆಸರು ರಾಜಕೀಯ ದುರುದ್ದೇಶ : ಬೈರಾರೆಡ್ಡಿ
ಬಳಿಕ ಬಿಜೆಪಿ ಮುಖಂಡ ಬೈರಾರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ ಬಾಬು ರವರಿಗೆ ನ್ಯಾಯ ದೊರಕಿಸಿಕೊಡಲು ನಾವು ಸಹ ಹೋರಾಟ ಮಾಡುತ್ತೇವೆ. ಆದರೆ ರಾಜಕೀಯ ದುರುದ್ದೇಶದಿಂದ ಸಂಸದ ಡಾ.ಕೆ.ಸುಧಾಕರ್ ರವರ ಹೆಸರನ್ನು ಎಫ್.ಐ.ಆರ್ ನಲ್ಲಿ ದಾಖಲಿಸಿದ್ದಾರೆ. ರಾಜ್ಯದಲ್ಲಿ ಅನೇಕ ಮಂತ್ರಿಗಳ ಹೆಸರುಗಳನ್ನು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಗಳು ಸಾಕಷ್ಟು ನಡೆದಿದೆ. ಆದರೆ ಅವರ ಮೇಲೆ ಇಲ್ಲಿಯವರೆಗೂ ಎಫ್.ಐ.ಆರ್ ಆಗಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡ ಒಂದೇ ದಿನದಲ್ಲಿ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಎ1 ಆರೋಪಿಯನ್ನಾಗಿ ಮಾಡಿರುವುದು ರಾಜಕೀಯ ದುರುದ್ದೇಶ ಎಂದೇ ಹೇಳಬಹುದು. ಸಂಸದರ ತ್ಯೇಜೋವಧೆ ಮಾಡುವ ನಿಟ್ಟಿನಲ್ಲಿ ಈ ರೀತಿಯ ರಾಜಕೀಯ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
Dr K Sudhakar – ಕರ್ನಾಟಕದಲ್ಲೂ ದ್ವೇಷ ರಾಜಕಾರಣ ಶುರುವಾಗಿದೆ : ಅಶ್ವತ್ಥರೆಡ್ಡಿ
ನಂತರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಅಶ್ವತ್ಥರೆಡ್ಡಿ ಮಾತನಾಡಿ, ಸಂಸದ ಡಾ.ಕೆ.ಸುಧಾಕರ್ ರವರು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಮೃತ ಬಾಬು ಹಣ ನೀಡಿದ್ದ ಎಂದು ಹೇಳಲಾಗಿದೆ. ಆ ಸಮಯದಲ್ಲಿ ಬಾರದ ಈ ವಿಚಾರ ಈಗ ಏಕೆ ಬಂತು, ಡಾ.ಸುಧಾಕರ್ ರವರನ್ನು ಬೇಕೆಂತಲೇ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಹಿಂದೆ ಆಂಧ್ರ ಪ್ರದೇಶದ ಸರ್ಕಾರದಲ್ಲಿ ಈ ರೀತಿಯಾಗಿ ಮಾಡುತ್ತಿದ್ದರು. ಇದೀಗ ಕರ್ನಾಟಕದಲ್ಲೂ ದ್ವೇಷ ರಾಜಕಾರಣ ಶುರುವಾಗಿದೆ.ಕೂಡಲೇ ಎಫ್.ಐ.ಆರ್ ನಲ್ಲಿ ಡಾ.ಸುಧಾಕರ್ ರವರ ಹೆಸರನ್ನು ತೆಗೆದುಹಾಕಬೇಕು ಇಲ್ಲವಾದಲ್ಲಿ ಕ್ಷೇತ್ರದಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Read this also : ಕಾರು ಚಾಲಕ ಆತ್ಮಹತ್ಯೆ ಕೇಸ್ : ಸಂಸದ ಸುಧಾಕರ್ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲು..!
ಈ ಸಮಯದಲ್ಲಿ ಡಾ.ಕೆ.ಸುಧಾಕರ್ ಯುವಸೇನೆಯ ಅಧ್ಯಕ್ಷ ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ಮುಖಂಡರಾದ ಶಿವಣ್ಣ, ಚಲಪತಿ, ವೆಂಕಟೇಶ್, ಮಹೇಂದ್ರ, ಕೃಷ್ಣಾರೆಡ್ಡಿ, ನರಸಿಂಹಪ್ಪ, ನಾಗೇಶ್ ಸೇರಿದಂತೆ ಹಲವರು ಇದ್ದರು.