ಪ್ರವಾಸಕ್ಕೆ ಹೋಗುವಂತಹ ಅನೇಕರಿಗೆ ಚಾರಣ (Trekking) ಎಂಬುದು ತುಂಬಾನೆ ಅಚ್ಚು ಮೆಚ್ಚು ಅಂತಾ ಹೇಳಬಹುದು. ಅಂತಹ ಚಾರಣ ಪ್ರಿಯರಿಗೆ ಕರ್ನಾಟಕ ಅರಣ್ಯ ಇಲಾಖೆ ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ರಾಜ್ಯದ ಎಲ್ಲಾ ಚಾರಣ (Trekking) ಮಾಡುವಂತಹ ಸ್ಥಳಗಳಿಗೆ ಒಂದೇ ವೇದಿಕೆಯ ಮೂಲಕ ಟಿಕೆಟ್ ಖರೀದಿಸಲು ಚಾರಣಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅರಣ್ಯ ವಿಹಾರ (Aranyavihaara Website) ಎಂಬ ವೆಬ್ ಸೈಟ್ ಗೆ ಚಾಲನೆ ನೀಡಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಅರಣ್ಯ ವಿಹಾರ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಚಾರಣ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗಾಗಿ ಈ ಹೊಸ ವೆಬ್ ಸೈಟ್ ಆರಂಭಿಸಲಾಗಿದೆ. ಸುಮಾರು 40 ಲಕ್ಷ ಮೊತ್ತದಲ್ಲಿ ಈ ಅಂತರ್ಜಾಲ ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಗಳಿಂದ ಒಂದು ಬಾರಿಗೆ 300 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ರಾಜ್ಯದಲ್ಲಿ ಐದು ಚಾರಣ ಪಥ ಇದೆ. ಇನ್ನೂ 18 ಚಾರಣ ಪಥ ಆಗಬೇಕಿದೆ. ರಾಜ್ಯದಲ್ಲಿ 40 ಚಾರಣ ಪಥ ಗುರ್ತಿಸಬಹುದಾಗಿದ್ದು, ಎಲ್ಲಾ ಚಾರಣ ಪ್ರದೇಶಗಳಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಬಾಬಾ ಬುಡನ್ ಗಿರಿ ಸೇರಿದಂತೆ 23 ಕಡೆ ಚಾರಣ ಪಥ ನಡೆಯುತ್ತಿತ್ತು. ಈ ಹಿಂದೆ ಅನೇಕ ಕಡೆ ಚಾರಣ ಪಥದಲ್ಲಿ ಅವಘಡ ಸಹ ನಡೆದಿತ್ತು. ಈ ಕಾರಣದಿಂದ ಐದು ಚಾರಣ ಪಥಕ್ಕೆ ಆನ್ ಲೈನ್ ವ್ಯವಸ್ಥೆ ಮಾಡುತ್ತಿದ್ದೇವೆ. ಪರಿಸರ ಪ್ರವಾಸೋದ್ಯಮದ ಕಾರಣದಿಂದ ಅರಣ್ಯಕ್ಕೆ ಧಕ್ಕೆಯಾಗಬಾರದು. ರಾಜ್ಯದ ಹಲವು ಕಡೆ ನಕಲಿ ಟಿಕೆಟ್ ಮಾರಾಟವಾಗುತ್ತಿತ್ತು. ಜೊತೆಗೆ ಬ್ಲಾಕ್ ನಲ್ಲೂ ಟಿಕೆಟ್ ಮಾರಾಟ ಮಾಡುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇನ್ನೂ ಈ ತಾಣದಲ್ಲಿ ಚಾರಣಕ್ಕೆ ಯಾವ ರೀತಿ ಬುಕ್ಕಿಂಗ್ ಮಾಡಬಹುದು ಎಂಬ ವಿಚಾರಕ್ಕೆ ಬಂದರೇ, ಉದಾಹರಣೆಗೆ ಒಂದು ತಂಡದಲ್ಲಿ 10 ಜನರಿದ್ದರೇ, ಆ ತಂಡದ ನಾಯಕ ಬುಕ್ ಮಾಡಿದರೇ ಸಾಕು ಆತನ ಮೊಬೈಲ್ ಗೆ ಬುಕ್ಕಿಂಗ್ ಒಟಿಪಿ ಬರುತ್ತದೆ. ದೊಡ್ಡ ಚಾರಣಕ್ಕೆ 350 + GST, ಸಣ್ಣ ಚಾರಣಕ್ಕೆ 250 + GST ದರ ನಿಗದಿ ಮಾಡಲಾಗಿದೆ. ಎರಡು ದಿನ ಮುನ್ನಾ ಬುಕ್ಕಿಂಗ್ ಮಾಡಬೇಕು. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಸಹ ಮಾಡಬಹುದು. ತಾವು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೇ ಶೇ.75% ಟಿಕೆಟ್ ಹಣ ಮರುಪಾವತಿಯಾಗುತ್ತದೆ. ಆರಂಭದಲ್ಲಿ ಸುಬ್ರಮಣ್ಯ-ಕುಮಾರ ಪರ್ವತ, ತಲಕಾವೇರಿಯಿಂದ-ನಿಶಾನಿ ಮೊಟ್ಟೆ, ಬೀದಳ್ಳಿಯಿಂದ-ಕುಮಾರ ಪರ್ವತ, ಚಾಮರಾಜನಗರದಿಂದ-ನಾಗಮಲೈ ಹಾಗೂ ಚಿಕ್ಕಬಳ್ಳಾಪುರ ಸ್ಕಂದಗಿರಿ ಚಾರಣಕ್ಕೆ ಈ ತಾಣದ ಮೂಲಕ ಟಿಕೆಟ್ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ Aranyavihaara Website (https://aranyavihaara.karnataka.gov.in/) ತಾಣವನ್ನು ಭೇಟಿ ನೀಡಬಹುದು.