ಕೆಲವು ದಿನಗಳ ಹಿಂದೆಯಷ್ಟೆ ನಂದಿನ ಹಾಲಿನ ದರ 2 ರೂಪಾಯಿ ಏರಿಕೆ ಮಾಡಿ ಆದೇಶ ಮಾಡಿತ್ತು. 50 ಎಂ.ಎಲ್. ಹಾಲು ಹೆಚ್ಚಿಗೆ ಮಾಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್ ಶಾಕ್ ಕೊಟ್ಟಿದೆ. ಹಾಲು ಉತ್ಪಾದಕರಿಂದ ಖರೀದಿ ಮಾಡುವ ಹಾಲಿಗೆ ಅಂದರೇ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಕಡಿತ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಕೋಚಿಮುಲ್ ಆಡಳಿತ ಮಂಡಳಿ ಜು.5 ರಿಂದ ಜಾರಿಗೆ ಬರುವಂತೆ ಸೂಚನೆ ನೀಡಿದೆ.
ಸಾಮಾನ್ಯವಾಗಿ ಬೆಲೆ ಏರಿಕೆಯಾದಾಗಲೆಲ್ಲಾ ರೈತರಿಗೆ ಒಂದಲ್ಲ ಒಂದು ರೀತಿಯ ತೊಂದರೆಯಾಗುತ್ತದೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ರೈತನಿಗೆ ಸಮಸ್ಯೆಯಾಗುತ್ತದೆ. ಇದರ ಜೊತೆಗೆ ಆಗಾಗ ಬೆಲೆ ಸಹ ರೈತನಿಗೆ ಕೈ ಕೊಡುತ್ತಿರುತ್ತದೆ. ಇದೀಗ ಕೋಚಿಮುಲ್ (Kochimul) ರೈತರಿಗೆ ಶಾಕ್ ನೀಡಿದೆ. ದಿಢೀರನೇ ಪ್ರತಿ ಲೀಟರ್ ಗೆ 2 ರೂಪಾಯಿಯಂತೆ ಹಾಲು ಕಡಿತ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 33.40 ರೂಪಾಯಿಯನ್ನು ಉತ್ಪಾದಕರಿಗೆ ನೀಡಲಾಗುತ್ತಿತ್ತು. ಹೊಸ ಆದೇಶದಂತೆ ಜು.5 ರಿಂದ ಪ್ರತಿ ಲೀಟರ್ ಗೆ 31.40 ರೂಪಾಯಿ ನೀಡಲು ಆದೇಶ ನೀಡಿದೆ.
ಕಳೆದ ಜನವರಿ ಮಾಹೆಯಲ್ಲಿ ಪ್ರತಿ ದಿನ ಕೋಚಿಮುಲ್ ಗೆ ಸುಮಾರು 9.65 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಜೂನ್ ತಿಂಗಳಿನಿಂದ ಪ್ರತಿನಿತ್ಯ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ 2.50 ಲಕ್ಷ ಲೀಟರ್ ಹಾಲು ಹೆಚ್ಚಳವಾಗಿದೆ. ಹಾಲಿನ ಶೇಖರಣೆ ಹೆಚ್ಚಾಗಿರುವುದರ ಜೊತೆಗೆ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಲೆ ಕಡಿತ ಮಾಡಿದೆ ಎನ್ನಲಾಗುತ್ತಿದೆ. ಈ ನಿರ್ಧಾರದಿಂದ ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ನಂದಿನಿ ಹಾಲಿನ ದರ ಹೆಚ್ಚಿಸಿ ಕೆಎಂಎಫ್ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಇದೀಗ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 2 ರೂಪಾಯಿ ಕಡಿತ ಮಾಡಿ ಶಾಕ್ ನೀಡಿದೆ.