515ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದು, ಈ ಕುರಿತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿ ರವರು ಡಿಕೆ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ದೇವೇಗೌಡರಿಗೆ ಅಪಮಾನವಾಗಿರುವ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನೆ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಸಿಎಂ ಸಿದ್ದರಾಮಯ್ಯ ರವರು ಡಿ.ಕೆ.ಶಿವಕುಮಾರ್ ರವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸ್ವಾಮೀಜಿಗಳು ಈ ಹಿಂದೆ ಹೇಗಿದ್ದರು ಎಂಬುದನ್ನು ಮೊದಲು ಹೇಳಬೇಕು, ದೇವೇಗೌಡರ ಬಗ್ಗೆ ಒಂದು ತಿಂಗಳಿನಿಂದ ಏನೆಲ್ಲಾ ನಡೆದಿದೆ. ಕೃತಜ್ಞತೆಗಾದರೂ ಸ್ವಾಮೀಜಿ ಈ ಬಗ್ಗೆ ಮಾತನಾಡಬೇಕಿತ್ತು. ನಮ್ಮ ನಾಯಕರು, ಮುಖಂಡರ ವಿರುದ್ದ ಕೆಲವರು ಯಾವ ರೀತಿಯೆಲ್ಲಾ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇನ್ನೂ ಸಿಎಂ ಬದಲಾವಣೆಯ ಬಗ್ಗೆ ಸಹ ಮಾತನಾಡಿದ್ದಾರೆ. ಸಿಎಂ ಯಾರನ್ನಾದರೂ ಮಾಡಿಕೊಳ್ಳಲಿ, ನಮಗೇನು, ಅದು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು, ನಮಗೇನು ಸಂಬಂಧವಿಲ್ಲ. ಮಠಕ್ಕೆ ದೇವೇಗೌಡರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡೋದು ಬೇಡ ದೇವೇಗೌಡರ ಬಗ್ಗೆ ಕಳೆದ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ಏನೆಲ್ಲಾ ಬಂತು ಈ ಬಗ್ಗೆ ಒಂದು ಮಾತಾದರೂ ಸ್ವಾಮೀಜಿಗಳು ಮಾತನಾಡಿಲ್ಲ. ಕೆಂಪೇಗೌಡರ ಕಾರ್ಯಕ್ರಮದಲ್ಲಿ ದೊಡ್ಡವರು ಮಠಕ್ಕೆ ಏನು ಮಾಡಿದ್ದರು ಎಂದು ಹೇಳಬಹುದಿತ್ತು. ಸ್ವಾಮೀಜಿ ನಮ್ಮ ಪರ ಮಾತನಾಡಿ ಎಂದು ನಾನು ಹೇಳುತ್ತಿಲ್ಲ. ಒಂದು ಸಮಾಜದ ಮುಖಂಡರನ್ನು ಆ ರೀತಿಯಾಗಿ ಅವಹೇಳನಕಾರಿಯಾಗಿ ಒಂದು ತಿಂಗಳಿನಿಂದ ಹೇಗೆಲ್ಲಾ ನಡೆಸಿಕೊಂಡ್ರು, ಅದನ್ನು ಸ್ವಾಮೀಜಿ ಖಂಡಿಸಬೇಕಾಗಿತ್ತು ಎಂದು ಚಂದ್ರಶೇಖರನಾಥ ಸ್ವಾಮೀಜಿಗಳ ವಿರುದ್ದ ಬೇಸರ ಹಾಗೂ ಆಕ್ರೋಷ ಹೊರಹಾಕಿದರು.