ನ್ಯಾಯಬೆಲೆ ಅಂಗಡಿಗಳ ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ (Ration Card e-KYC) ಮಾಡಿಸಲು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸುಸ್ತಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿಸುದ್ದಿ! ಇನ್ಮುಂದೆ ಪಡಿತರ ಅಂಗಡಿಗೆ ಅಲೆಯುವ ಅಗತ್ಯವಿಲ್ಲ; ನಿಮ್ಮ ಕೈಯಲ್ಲೇ ಇರುವ ಸ್ಮಾರ್ಟ್‌ಫೋನ್ ಮೂಲಕ, ಮನೆಯಲ್ಲೇ ಆರಾಮವಾಗಿ ಕುಳಿತು ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇದಕ್ಕಾಗಿ ‘ಅನ್ನ ಸೇವೆ‘ (Anna Seve App) ಎಂಬ ವಿನೂತನ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದೆ.

Ration Card e-KYC – ಏನಿದು ‘ಅನ್ನ ಸೇವೆ’ ಆಪ್? ಸಚಿವರು ಹೇಳಿದ್ದೇನು?
ಗುರುವಾರದಂದು ಆಹಾರ ಇಲಾಖೆ ಸಚಿವರಾದ ರಿಜ್ವಾನ್ ಅರ್ಷದ್ ಅವರು ಈ ನೂತನ ‘ಅನ್ನ ಸೇವೆ’ ಆಪ್‌ಗೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು: “ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಾರ್ವಜನಿಕರು ಎದುರಿಸುತ್ತಿದ್ದ ಇ-ಕೆವೈಸಿ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸಾಮಾನ್ಯರು, ವೃದ್ಧರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ತಂತ್ರಜ್ಞಾನದ ನೆರವಿನೊಂದಿಗೆ ಈ ಆ್ಯಪ್ ರೂಪಿಸಲಾಗಿದೆ. ಇನ್ಮುಂದೆ ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನಲ್ಲೇ ಸುಲಭವಾಗಿ ಇ-ಕೆವೈಸಿ ಮುಗಿಸಿಕೊಳ್ಳಬಹುದು” ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಯಾವೆಲ್ಲಾ 8 ಜಿಲ್ಲೆಗಳಿಗೆ ಸೇವೆ ಲಭ್ಯ?
ಸದ್ಯಕ್ಕೆ ಈ ಸೇವೆಯನ್ನು ಪ್ರಾಯೋಗಿಕವಾಗಿ (Pilot Project) ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರ ಜಾರಿಗೆ ತರಲಾಗಿದೆ.
ಮೊದಲ ಹಂತದ 8 ಜಿಲ್ಲೆಗಳ ಪಟ್ಟಿ:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಉಡುಪಿ
- ಹಾವೇರಿ
- ಉತ್ತರ ಕನ್ನಡ (ಕಾರವಾರ)
- ಬಳ್ಳಾರಿ
- ಬೀದರ್
- ಕೊಪ್ಪಳ
ಈ ಮೇಲಿನ 8 ಜಿಲ್ಲೆಗಳ ಆಹಾರ ನಿರೀಕ್ಷಕರು, ಇಲಾಖೆಯ ಜಂಟಿ/ಉಪ ನಿರ್ದೇಶಕರು ಹಾಗೂ ಸಾರ್ವಜನಿಕ ಫಲಾನುಭವಿಗಳು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸ್ವತಃ ತಾವೇ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಉಳಿದ ಜಿಲ್ಲೆಗಳ ಜನರಿಗೆ ಈ ಸೌಲಭ್ಯ ಯಾವಾಗ?
ನಿಮ್ಮ ಜಿಲ್ಲೆ ಮೇಲಿನ ಪಟ್ಟಿಯಲ್ಲಿಲ್ಲವೇ? ಚಿಂತಿಸಬೇಕಿಲ್ಲ! ಆಹಾರ ಇಲಾಖೆಯು ಹಂತ-ಹಂತವಾಗಿ ಈ ಸೇವೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಸಿದ್ಧತೆ ನಡೆಸಿದೆ.
ಎರಡನೇ ಹಂತದ ವಿಸ್ತರಣೆ (Phase 2):
- ದಿನಾಂಕ: ಅಕ್ಟೋಬರ್ 10 ರಿಂದ
- ವ್ಯಾಪ್ತಿ: ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ಫಲಾನುಭವಿಗಳು ಅಕ್ಟೋಬರ್ 10 ರಿಂದ ‘ಅನ್ನ ಸೇವೆ’ ಆಪ್ ಡೌನ್‌ಲೋಡ್ ಮಾಡಿಕೊಂಡು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು.
‘ಅನ್ನ ಸೇವೆ’ ಮೊಬೈಲ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?
ಪ್ಲೇಸ್ಟೋರ್‌ನಲ್ಲಿ ಯಾವಾಗ ಸಿಗಲಿದೆ?
ಗುರುವಾರವಷ್ಟೇ ಆಪ್ ಬಿಡುಗಡೆಯಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಲ್ಲಿ (Google Play Store) ಅಧಿಕೃತವಾಗಿ ಅಪ್‌ಡೇಟ್ ಆಗಲು ತಾಂತ್ರಿಕವಾಗಿ ಕೆಲ ಸಮಯ ಬೇಕಾಗುತ್ತದೆ. ಇಲಾಖೆಯ ಮೂಲಗಳ ಪ್ರಕಾರ, ಶುಕ್ರವಾರದಿಂದ ಈ ಆಪ್ ಪ್ಲೇಸ್ಟೋರ್‌ನಲ್ಲಿ ಸಾರ್ವಜನಿಕರ ಡೌನ್‌ಲೋಡ್‌ಗೆ ಮುಕ್ತವಾಗಿ ಸಿಗಲಿದೆ.
ಆಪ್ ಬಳಸುವ ಮುನ್ನ ಈ ಮಾರ್ಗಸೂಚಿ ಗಮನಿಸಿ:
- ‘ಅನ್ನ ಸೇವೆ’ ಆಪ್ ಡೌನ್‌ಲೋಡ್ ಮಾಡುವ ಮುನ್ನ, ಮುಖ ಚಹರೆ ಗುರುತಿಸುವ (Face RD) ಸಹಾಯಕ ಆಪ್ಗಳನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
- ಫಲಾನುಭವಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳು ಇಲಾಖೆ ಸೂಚಿಸಿದ ಸಹಾಯಕ ಆಪ್ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. Read this also : 2028ರ ನಂತರವೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಂದ್ ಆಗಲ್ಲ: ಚಾಮರಾಜನಗರದಲ್ಲಿ ಡಿಕೆಶಿ ಸ್ಪಷ್ಟನೆ
ರೇಷನ್ ಕಾರ್ಡ್ ಇ-ಕೆವೈಸಿ (e-KYC) ಕಡ್ಡಾಯ ಏಕೆ?
ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಚೀಟಿದಾರರು ಪ್ರತಿ 5 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ನವೀಕರಿಸಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸಲು ಹಾಗೂ ನಕಲಿ ಕಾರ್ಡ್‌ಗಳನ್ನು ತಡೆಯಲು ಇದು ಅನಿವಾರ್ಯ.
ರಾಜ್ಯದಲ್ಲಿ ಇ-ಕೆವೈಸಿ ಸ್ಥಿತಿಗತಿ ಹೇಗಿದೆ?
- 5 ವರ್ಷ ಪೂರೈಸಿದ ಒಟ್ಟು ಫಲಾನುಭವಿಗಳು: 2,67,64,276
- ಈಗಾಗಲೇ ಇ-ಕೆವೈಸಿ ಮುಗಿಸಿದವರು: 1,56,21,608 (ಸೆಪ್ಟೆಂಬರ್ 20 ರ ಅಂಕಿ-ಅಂಶದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್/ಐರಿಸ್ ಮೂಲಕ ಪೂರ್ಣಗೊಳಿಸಿದ್ದಾರೆ).
- ಒಮ್ಮೆಯೂ ಇ-ಕೆವೈಸಿ ಮಾಡಿಸದವರು: 3,82,362 ಜನರು!
ಇ-ಕೆವೈಸಿ ಮಾಡಿಸದಿದ್ದರೆ ಏನಾಗಲಿದೆ?
ಎಚ್ಚರಿಕೆ: ರಾಜ್ಯದಲ್ಲಿ ಇದುವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕೂಡಲೇ ಈ ಪ್ರಕ್ರಿಯೆ ಮುಗಿಸಬೇಕು. ತಪ್ಪಿದ್ದಲ್ಲಿ ಅಂತಹ ಫಲಾನುಭವಿಗಳ ಪಡಿತರ ಸ್ಥಗಿತ ಅಥವಾ ನಿಯಮಾನುಸಾರ ಮುಂದಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.




