ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ 1 ಲಕ್ಷ ನೀಡಲಾಗುವುದು ಎಂದ ಡಿಸಿಎಂ ಡಿಕೆಶಿ…!

ರಾಜ್ಯದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು ಜೂನ್.27ರಂದು ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಾರಿ ರಾಜ್ಯದಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ನಿರ್ಧಾರ ಮಾಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರ ಸಂಕೀರ್ಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒಂದು ಲಕ್ಷ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ತಿಳಿಸಿದ್ದಾರೆ.

ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍  ನೇತೃತ್ವದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯ ಕುರಿತು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಕೆಂಪೇಗೌಡರ ದೂರ ದೃಷ್ಟಿ, ಅವರ ನಿಲುವು ಹಾಗೂ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಚಾರ ಸಂಕೀರ್ಣಗಳನ್ನು ನಡೆಸಲು 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈಗಾಗಲೇ ಕೆಂಪೇಗೌಡರು ಐಕ್ಯರಾದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಜೊತೆಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮಹನೀಯರಾದ ಕೆಂಪೇಗೌಡರ ಜಯಂತಿಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿ ಆಚರಣೆ ಮಾಡಬಾರದು. ಜಾತ್ಯಾತೀತ ವರ್ಗಗಳ ನಾಯಕರಾಗಿದ್ದ ಕೆಂಪೇಗೌಡರ ಜಯಂತಿಯನ್ನು ಇಡೀ ಕರ್ನಾಟಕದ ಜನತೆ ಹಬ್ಬದಂತೆ ಒಟ್ಟಾಗಿ ಆಚರಣೆ ಮಾಡಬೇಕೆಂದರು.

D K Shivakumar meeting about kempegowda jayanthi 1

ಕೆಂಪೇಗೌಡರ 515ನೇ ಜಯಂತಿಯ ಪ್ರಯುಕ್ತ ಸಭೆ ನಡೆಸಲಾಗಿದೆ. ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಿ ಚರ್ಚೆ ಮಾಡಿದ್ದೇವೆ,. ಪಕ್ಷ, ಜಾತಿ, ಧರ್ಮ ದೂರವಿಟ್ಟು ಸಭೆ ಮಾಡಿದ್ದೇವೆ. ಜೂನ್.27 ರಂದು ಬೆಂಗಳೂರಿನಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ. ವಿಧಾನಸೌಧದಲ್ಲಿ ಜಯಂತಿ ಆಚರಣೆ ಮಾಡಿದರೇ ಜಾಗ ಚಿಕ್ಕದಾಗುತ್ತದೆ. ಆದ್ದರಿಂದ ಅರಮನೆ ಮೈದಾನ ಅಥವಾ ಸ್ಟೇಡಿಯಂನಲ್ಲಿ ಆಚರಣೆ ಮಾಡಲು ಮನವಿ ಬಂದಿದೆ. ಈ ಬಾರಿ ಜಯಂತಿಯನ್ನು ಎಲ್ಲಿ ಆಚರಣೆ ಮಾಡಬೇಕೆಂಬುದನ್ನು ತೀರ್ಮಾನ ಮಾಡಬೇಕಿದೆ. ಇನ್ನೂ ಜಯಂತಿಗೆ ಆರು ಕಡೆಯಿಂದ ಜ್ಯೋತಿಗಳು ಬರುತ್ತವೆ. ಸಭೆಯಲ್ಲಿ ಸಾಕಷ್ಟು ಸಲಹೆಗಳು ಬಂದಿದೆ. ಮುಂದಿನ ವರ್ಷದೊಳಗೆ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ಕಟ್ಟಡ ನಿರ್ಮಾಣ ಮಾಡಬೇಕು, ಸುಮನಹಳ್ಳಿಯಲ್ಲಿ 5 ಎಕರೆ ಜಮೀನು ನೀಡಿದ್ದು, ಸಾಧ್ಯವಾದರೇ ಕೆಂಪೇಗೌಡ ಜಯಂತಿಯಂದೇ ಭೂಮಿ ಪೂಜೆ ಮಾಡಲಾಗುತ್ತದೆ ಎಂದಿದ್ದಾರೆ.

Leave a Comment

Your email address will not be published. Required fields are marked *

Scroll to Top