ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವಕನೋರ್ವ, ತನ್ನ ಸ್ನೇಹಿತೆಯ ರೂಮಿಗೆ ಯುವತಿಯನ್ನು ಕರೆದೊಯ್ದು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ. ಇದು ಪ್ರೇಮ ಪ್ರಕರಣದ ವೈಫಲ್ಯವೋ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

Bengaluru – ಯಾರು ಈ ದೇವಿಶ್ರೀ? ಏನಾಯಿತು?
ಕೊಲೆಯಾದ ಯುವತಿಯನ್ನು ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿ ದೇವಿಶ್ರೀ (21) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ (BBM) ವ್ಯಾಸಂಗ ಮಾಡುತ್ತಿದ್ದ ದೇವಿಶ್ರೀ, ಉತ್ತಮ ಭವಿಷ್ಯದ ಕನಸು ಕಂಡಿದ್ದಳು.
ಘಟನೆ ನಡೆದದ್ದು ಭಾನುವಾರ (ನವೆಂಬರ್ 23). ಬೆಳಗ್ಗೆ ದೇವಿಶ್ರೀ, ಪ್ರೇಮ್ ವರ್ಧನ್ ಎಂಬ ಯುವಕನ ಜೊತೆ ತನ್ನ ಸ್ನೇಹಿತೆಯ ರೂಮಿಗೆ ತೆರಳಿದ್ದಳು. ಆದರೆ, ಆ ರೂಮಿನಲ್ಲಿ ಆಕೆಯ ಜೀವವೇ ಅಂತ್ಯಗೊಂಡಿದೆ. ಇಂದು (ನವೆಂಬರ್ 24) ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.
Bengaluru – ಪೋಷಕರ ಆಕ್ರಂದನ, ನ್ಯಾಯಕ್ಕಾಗಿ ಆಗ್ರಹ
ಮೃತ ದೇವಿಶ್ರೀ ರೆಡ್ಡಪ್ಪ ಮತ್ತು ಜಗದಂಭ ದಂಪತಿಯ ಕೊನೆಯ ಮಗಳು. ಮಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪೋಷಕರು ಆಕೆಯನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ಆದರೆ ಈಗ ಮಗಳ ಅಕಾಲಿಕ ಸಾವಿನ ಸುದ್ದಿ ಕೇಳಿ ಅವರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. Read this also : ಹೈದರಾಬಾದ್ ನಲ್ಲಿ ನಡೆದ ಘಟನೆ, ‘ದೇವರು ಕರೆಯುತ್ತಿದ್ದಾನೆ’ ಎಂದು ಇಡೀ ಕುಟುಂಬವೇ ಅಂತ್ಯಕ್ಕೆ ಶರಣು?
ಘಟನೆ ಸಂಬಂಧ ದೇವಿಶ್ರೀ ದೊಡ್ಡಮ್ಮ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ನಮ್ಮ ಮಗಳು ಓದಲೆಂದು ಇಲ್ಲಿಗೆ ಬಂದಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತನಾಡಿದ್ದಾಳೆ. ಆಮೇಲೆ ಕರೆ ಮಾಡಿದರೂ ಫೋನ್ ಪಿಕ್ ಮಾಡಿಲ್ಲ. ಅವಳ ಸ್ನೇಹಿತೆ ಕರೆ ಮಾಡಿ ರೂಂಗೆ ಕರೆಸಿಕೊಂಡಿದ್ದಾಳೆಂದು ಗೊತ್ತಾಗಿದೆ. ಅಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯ ಬೇಕು” ಎಂದು ಕಣ್ಣೀರಿಟ್ಟಿದ್ದಾರೆ.

Bengaluru – ಪ್ರೇಮ್ ವರ್ಧನ್‌ಗಾಗಿ ತಲಾಷ್
ಈ ದಾರುಣ ಕೃತ್ಯದ ಬಳಿಕ ಆರೋಪಿ ಪ್ರೇಮ್ ವರ್ಧನ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಮಾದನಾಯಕನಹಳ್ಳಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸದ್ಯ, ಕೊಲೆಯಾದ ಯುವತಿ ದೇವಿಶ್ರೀ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
