Viral – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಗವಿಕುಂಟಹಳ್ಳಿ ಗ್ರಾಮದಲ್ಲಿ ಗುರುವಾರ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಇಲ್ಲಿನ ರೈತರೊಬ್ಬರ ಮೇಕೆಯೊಂದು ಹಂದಿಯ ರೂಪವನ್ನು ಹೋಲುವ ಮರಿಯೊಂದಕ್ಕೆ ಜನ್ಮ ನೀಡಿದ್ದು, ಇದು ಸ್ಥಳೀಯರಲ್ಲಿ ತೀವ್ರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಈ ವದಂತಿ ಜೋರಾಗಿಯೇ ಹರಿದಾಡಿದೆ. ಈ ಸಂಬಂಧ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ಸಹ ನೀಡಿದ್ದಾರೆ.

Viral – ಏನಿದು ಅಪರೂಪದ ಘಟನೆ?
ಗವಿಕುಂಟಹಳ್ಳಿ ಗ್ರಾಮದ ರೈತ ಗಂಗರಾಜು ಅವರಿಗೆ ಸೇರಿದ ಮೇಕೆ ಮರಿಯೊಂದಕ್ಕೆ ಜನ್ಮ ನೀಡಿತ್ತು. ಆದರೆ, ಆ ಮರಿಯು ಸಾಮಾನ್ಯ ಮೇಕೆ ಮರಿಯಂತೆ ಇರದೆ, ಹಂದಿಯ ಮುಖ ಮತ್ತು ಶರೀರವನ್ನು ಹೋಲುತ್ತಿತ್ತು ಎನ್ನಲಾಗಿದೆ. ಈ ವಿಚಿತ್ರ ಮರಿಯ ಜನನದ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ವಿಸ್ಮಯದಿಂದ ವೀಕ್ಷಿಸಿದರು. ದುರದೃಷ್ಟವಶಾತ್, ಈ ಅಸಹಜ ಮರಿಯು ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
Viral – ‘ಕಾಲಜ್ಞಾನ’ ನೆನಪಿಸಿಕೊಂಡ ಗ್ರಾಮಸ್ಥರು
ಈ ಅಸಾಮಾನ್ಯ ಘಟನೆ ಕಂಡ ಗ್ರಾಮಸ್ಥರು, ಇದನ್ನು ಕೇವಲ ಪ್ರಕೃತಿ ವೈಪರೀತ್ಯ ಎಂದು ಭಾವಿಸದೆ, ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಕಾಲಜ್ಞಾನಿ ಶ್ರೀ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಅವರು ತಮ್ಮ ಕಾಲಜ್ಞಾನದಲ್ಲಿ ಇಂತಹ ಪ್ರಾಣಿಗಳ ಅಸಹಜ ಜನನಗಳ ಬಗ್ಗೆ ನುಡಿದಿರುವುದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. Read this also : ಪವಾಡವೋ? ಪ್ರಕೃತಿಯ ವಿಸ್ಮಯವೋ? ಬೇವಿನ ಮರದಲ್ಲಿ ಹಾಲು ಜಿನುಗು – ಹರಿದು ಬಂದ ಭಕ್ತರ…!
ಪ್ರಕೃತಿಯಲ್ಲಿ ಹೀಗೆ ವಿಚಿತ್ರ ಘಟನೆಗಳು ನಡೆದರೆ ಅದು ಶುಭ ಸೂಚಕವಲ್ಲ ಎಂದು ನಂಬಿರುವ ಗ್ರಾಮಸ್ಥರು, ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ವೀರಬ್ರಹ್ಮೇಂದ್ರ ಸ್ವಾಮಿಗಳ ಕಾಲಜ್ಞಾನದಲ್ಲಿ ಹೇಳಿದಂತೆ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

Viral – ಪಶು ಇಲಾಖೆಯ ಸ್ಪಷ್ಟನೆ: ವದಂತಿಗಳಿಗೆ ತೆರೆ!
ಇನ್ನೂ ಈ ಕುರಿತು ಪಶು ಇಲಾಖೆಯ ಅಧಿಕಾರಿ ಡಾ.ಮಂಜುಳ ಮಾತನಾಡಿದ್ದು, ಗವಿಕುಟಂಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮೇಕೆಗೆ ಜನಿಸಿದ ಮರಿಯ ಬಾಯಿ ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಮರಿಯ ದೇಹ ಸಂಪೂರ್ಣವಾಗಿ ಮೇಕೆಯಂತೆ ಹೋಲುತ್ತದೆ. ನಮಗೆ ಎಲ್ಲೂ ಹಂದಿ ಮರಿಯಂತೆ ಕಾಣಿಸಿಲ್ಲ. ಜೊತೆಗೆ ಮೇಕೆ ಮರಿಯ ಮರಣೋತ್ತರ ಪರೀಕ್ಷೆ ಸಹ ನಡೆಸಲಾಗಿದ್ದು, ಆಗಲೂ ಸಹ ಅದು ಮೇಕೆ ಮರಿ ಎಂದೇ ತಿಳಿದುಬಂದಿದೆ. ಈ ಕುರಿತು ಸಾರ್ವಜನಿಕರು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಾರದು. ತಮಗೆ ಏನೇ ಸಮಸ್ಯೆಯಿದ್ದರೂ ಪಶು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಎಂದರು.
