ಗುಡಿಬಂಡೆ: ಪಟ್ಟಣದ ಎರಡನೇ ವಾರ್ಡಿನ ಶ್ರೀ ಜಾಲಾರಿ ಸಪ್ಪಲಮ್ಮ ದೇವಿಯ ಧರ್ಮರಾಯ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಇಡೀ ರಾತ್ರಿ ಕರಗ ನರ್ತನ, ವಾದ್ಯಗೋಷ್ಟಿ ಕಾರ್ಯಕ್ರಮಗಳು ನಡೆದಿದ್ದು, ಅಪಾರ ಸಂಖ್ಯೆಯ ಜನತೆ ಭಾಗವಹಿಸಿದ್ದರು. ಕರಗ ಮಹೋತ್ಸವ ಇಡೀ ರಾತ್ರಿ ಹಬ್ಬದ ಸಡಗರ ಮೂಡುವಂತೆ ಮಾಡಿತ್ತು.
ಜಾಲಾರಿ ಸಪ್ಪಲಮ್ಮ ದೇವಿಯ ಕರಗವನ್ನು ಆಂಧ್ರಪ್ರದೇಶದ ರಾಮ್ ಕುಪ್ಪಂನ ಬಾಲಾಜಿ ಅವರು ಕರಗವನ್ನು ಹೊತ್ತು ಪಟ್ಟಣದ ಪ್ರತೀ ಬೀದಿಯಲ್ಲೂ ಮೆರವಣಿಗೆ ಮೂಲಕ ಸಂಚರಿಸಿದರು. ಸೊಪ್ಪಿನ ಪೇಟೆಯ ಜಾಲಾರಿ ಸಪ್ಪಲಮ್ಮ ದೇವಿಯ ದೇವಾಲಯದಿಂದ ಬುಧವಾರ ರಾತ್ರಿ ಸುಮಾರು ರಾತ್ರಿ 11.30ರ ಸಮಯದಲ್ಲಿ ಸುಮಾರು 20 ರಿಂದ 30 ಕೆಜಿ ತೂಕದ ಕರಗವನ್ನು ಹೊತ್ತು ಹೊರಬಂದು ಇಡೀ ರಾತ್ರಿ ಪಟ್ಟಣದ 11ವಾರ್ಡುಗಳನ್ನು ಸುತ್ತಿದರು. ಇನ್ನೂ ನೂರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾವರ್ಜನಿಕರು ಈ ಕರಗವನ್ನು ವೀಕ್ಷಣೆ ಮಾಡಲು ಬಂದಿದ್ದರು.
ಬುಧವಾರ ರಾತ್ರಿ ಯಿಂದ ಆರಂಭವಾಗಿ ಗುರುವಾರ ಬೆಳಗ್ಗೆ 9 ಗಂಟೆಯ ವರೆಗೆ ಇಡೀ ರಾತ್ರಿ ಕರಗವನ್ನು ಹೊತ್ತು ಪಟ್ಟಣದಾದ್ಯಂತ ಸುತ್ತಿದ ಕೊಪ್ಪಂ ಮೂಲದ ಬಾಲಾಜಿ ಗುರುವಾರ ಬೆಳಿಗ್ಗೆ 10.30ರ ಸಮಯದಲ್ಲಿ ಯಾವುದೇ ರೀತಿಯ ಆದರವಿಲ್ಲದೆ ಒನಕೆಯ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯಲ್ಲಿ ಇಟ್ಟು ಒನಕೆಯನ್ನು ತಲೆಯಮೇಲೆ ಹೊತ್ತು ಒನಕೆಯು ಬೀಳದಂತೆ ನೃತ್ಯವನ್ನು ಪ್ರದರ್ಶಿಸಿದರು.