ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಪಡೆದುಕೊಂಡಿದ್ದರು. ಇತ್ತೀಚಿಗಷ್ಟೆ ಭಾರತದ ಪೌರತ್ವ ಪಡೆದುಕೊಂಡಿದ್ದು, ಮೊದಲ ಬಾರಿಗೆ ಅವರು ಭಾರತದಲ್ಲಿ ಮತ ಚಲಾಯಿಸಿದ್ದಾರೆ. ಇಂದು ಮತ ಚಲಾಯಿಸಿದ ಅಕ್ಷಯ್ ಕುಮಾರ್ ಭಾರತದ ಅಭಿವೃದ್ದಿ ಹಾಗೂ ಬಲಿಷ್ಟ ರಾಷ್ಟ್ರಕ್ಕಾಗಿ ಪ್ರತಿಯೊಬ್ಬ ಮತದಾರ ತಮ್ಮ ಮತ ಚಲಾಯಿಸಿ ಎಂದು ತಿಳಿಸಿದ್ದಾರೆ.
ಸದ್ಯ ಲೋಕಸಭಾ ಚುನಾವಣೆ 204ರ ಐದನೇ ಹಂತದ ಮತದಾನ ನಡೆಯುತ್ತಿದೆ. 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್‌ನ 3, ಲಡಾಖ್‍ನ 1, ಮಹಾರಾಷ್ಟ್ರದ 13, ಬಿಹಾರದ 5, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ಅಮೇಥಿ, ರಾಯ್ ಬರೇಲಿ, ಕೈಸರ್ ಗಂಜ್, ಸರನ್, ಲಕ್ನೋ ಸೇರಿದಂತೆ ಮುಂಬೈನ ಎಲ್ಲಾ ಕ್ಷೇತ್ರಗಳು ಹೈ ವೋಲ್ಟೇಜ್ ಕ್ಷೇತ್ರಗಳಾಗಿವೆ ಎಂದು ಹೇಳಲಾಗಿದೆ.
ಇನ್ನೂ ಭಾರತೀಯ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತ ಚಲಾಯಿಸಿದ ಅಕ್ಷಯ್ ಕುಮಾರ್ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಭಾರತೀಯ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತ ಚಲಾಯಿಸಲು ನನಗೆ ತುಂಬಾ ಸಂತೋಷವಾಗಿದೆ. ಸರಿಯಾದ ಅಭ್ಯರ್ಥಿಗೆ ತಾವು ಸಹ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ನನ್ನ ಭಾರತ ಅಭಿವೃದ್ದಿಯಾಗಬೇಕು, ಸದೃಢವಾಗಬೇಕು ಎಂದು ನಾನು ಬಯಸುತ್ತೇನೆ. ಅದನ್ನೇ ನಾನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸಿದ್ದೇನೆ. ಪ್ರತಿಯೊಬ್ಬರು ಮತ ಚಲಾಯಿಸಬೇಕು ಅವರಿಗೆ ಸರಿ ಅನ್ನಿಸಿದ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಈ ವರ್ಷದ ಮತದಾನ ಉತ್ತಮ ವಾಗಿರುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಈ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಮೃತಿ ಇರಾನಿ ಹಾಗೂ ಕೆ.ಎಲ್.ಶರ್ಮಾ, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್, ಲಕ್ನೋದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರದ ಸರಣ್‍ನಿಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಮಹಾರಾಷ್ಟ್ರ ಕಲ್ಯಾಣದಿಂದ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ, ಮುಂಬೈ ಉತ್ತರದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ವಕೀಲ ಉಜ್ವಲ್ ನಿಕಮ್, ಮಧ್ಯ ಮುಂಬೈ ವರ್ಷಾ ಗಾಯಕ್ವಾಡ್ ಪ್ರಮುಖ ಅಭ್ಯರ್ಥಿಗಳಾಗಿದ್ದು ಹೈ ವೋಲ್ಟೇಜ್ ಕ್ಷೇತ್ರಗಳಾಗಿವೆ ಎನ್ನಲಾಗಿದೆ.