Belagavi – ಪ್ರೀತಿ-ಪ್ರೇಮದ ವಿಷಯ ಬಂದಾಗ ನಮ್ಮ ಸಮಾಜದಲ್ಲಿ ಆಗಾಗ ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದವರ ಜೊತೆ ಓಡಿ ಹೋಗಿ ಮದುವೆಯಾಗುವುದು, ಇನ್ನು ಕೆಲವೆಡೆ ಇಷ್ಟವಿಲ್ಲದ ಮದುವೆಯಾದರೆ ಗೌರವದ ಹೆಸರಿನಲ್ಲಿ ಹೆತ್ತವರೇ ಮಕ್ಕಳ ಪ್ರಾಣ ತೆಗೆಯುವುದು… ಇಂತಹ ಕಹಿ ಸಂಗತಿಗಳ ಮಧ್ಯೆ, ಇಲ್ಲೊಂದು ವಿಚಿತ್ರ ಮತ್ತು ಮನ ಕಲಕುವ ಘಟನೆಯೊಂದು ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ.

Belagavi – ಮಗಳು ಸತ್ತಳು ಎಂದು ಇಡೀ ಊರಿಗೆ ತಿಥಿ ಭೋಜನ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದ ಈ ಘಟನೆ ನಿಜಕ್ಕೂ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿದ ಯುವಕನೊಂದಿಗೆ ಓಡಿ ಹೋದ ಮಗಳಿಗಾಗಿ ತಂದೆಯೊಬ್ಬರು ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ! “ಮಗಳು ನಮ್ಮ ಪಾಲಿಗೆ ಸತ್ತೇ ಹೋಗಿದ್ದಾಳೆ” ಎಂದು ಇಡೀ ಗ್ರಾಮಕ್ಕೆ ಘೋಷಿಸುವ ಮೂಲಕ ತಂದೆ ತಮ್ಮ ಆಕ್ರೋಶ ಮತ್ತು ದುಃಖವನ್ನು ಹೊರಹಾಕಿದ್ದಾರೆ. Read this also : ಅಂತರಧರ್ಮೀಯ ವಿವಾಹದ ಆಕ್ರೋಶ, ಜೀವಂತ ಮಗಳಿಗೇ ಶ್ರಾದ್ಧ ಮಾಡಿದ ಪೋಷಕರು, ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ…!
Belagavi – ಏನು ನಡೆಯಿತು? ಪ್ರೀತಿ ಮತ್ತು ವಿರೋಧ
ನಾಗರಾಳ ಗ್ರಾಮದ ನಿವಾಸಿ ಶಿವಗೌಡ ಪಾಟೀಲ್ ಅವರ ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ಓಡಿಹೋದವಳು ಕೊನೆಯವಳು. ಈ ಮಗಳು ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಪಾಟೀಲ್ ಕುಟುಂಬಕ್ಕೆ ಈ ಸಂಬಂಧ ಕಿಂಚಿತ್ತೂ ಸಮ್ಮತಿ ಇರಲಿಲ್ಲ. ಪೋಷಕರು ಒಪ್ಪದಿದ್ದಾಗ, ಈ ಪ್ರೇಮಿಗಳು ಓಡಿ ಹೋಗಲು ನಿರ್ಧರಿಸಿದ್ದಾರೆ. ಆರಂಭದಲ್ಲಿ ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ (Missing Complaint) ಎಂದು ದೂರು ದಾಖಲಿಸಿದ್ದರು. ಆದರೆ, ನಂತರ ತನಿಖೆಯಿಂದ ಮಗಳು ತಾನು ಪ್ರೀತಿಸಿದ ಯುವಕನ ಜೊತೆ ಹೋಗಿರುವುದು ತಿಳಿದುಬಂದಿದೆ.
Belagavi – ‘ಶ್ರದ್ಧಾಂಜಲಿ’ ಬ್ಯಾನರ್ ಮತ್ತು ಊರಿಗೆ ಊಟ
ಮಗಳು ಮನೆತನದ ಸಂಸ್ಕಾರ ಮತ್ತು ಗೌರವವನ್ನು ಮುರಿದಿದ್ದಾಳೆ ಎಂದು ಮನನೊಂದ ಶಿವಗೌಡ ಪಾಟೀಲ್ ಅವರು ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಮಗಳೊಂದಿಗಿನ ಕರುಳುಬಳ್ಳಿಯ ಸಂಬಂಧವನ್ನೇ ಕತ್ತರಿಸಿಕೊಂಡಿದ್ದೇನೆ ಎಂದು ಘೋಷಿಸಿದ ಅವರು, ಗ್ರಾಮದಲ್ಲಿ ಮಗಳಿಗೆ ‘ತಿಥಿ’ಯನ್ನು ನೆರವೇರಿಸಿದ್ದಾರೆ.

ತಮ್ಮ ಬಂಧು-ಬಳಗ, ಸಂಬಂಧಿಕರು ಮಾತ್ರವಲ್ಲದೆ, ಇಡೀ ಗ್ರಾಮದ ಜನರಿಗೂ ಭೋಜನದ ವ್ಯವಸ್ಥೆ ಮಾಡಿಸಿದ್ದರು. ಅಷ್ಟೇ ಅಲ್ಲದೆ, ನಾಗರಾಳ ಗ್ರಾಮದಾದ್ಯಂತ ತಮ್ಮ ಮಗಳ ಭಾವಚಿತ್ರ ಇರುವ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಸಹ ಹಾಕಿಸಿ, ಓಡಿಹೋದ ಮಗಳು ಇನ್ನು ತಮ್ಮ ಪಾಲಿಗೆ ಇಲ್ಲ ಎಂದು ಸಾರಿದ್ದಾರೆ.
