Strike – ಕರ್ನಾಟಕ ಹೈಕೋರ್ಟ್‌ನ ಮಹತ್ವದ ಆದೇಶದ ಹೊರತಾಗಿಯೂ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಮುಂದೂಡಲು ನಿರಾಕರಿಸಿದ್ದಾರೆ. ನಾಳೆ (ಆಗಸ್ಟ್ 5) ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಖಚಿತಪಡಿಸಿದ್ದು, ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
Strike – ಏನಿದು ಹೈಕೋರ್ಟ್ ಆದೇಶ?
ನಾಳೆ ನಡೆಯಲಿರುವ ಸಾರಿಗೆ ನೌಕರರ ಮುಷ್ಕರಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ (PIL) ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಮುಷ್ಕರವನ್ನು ನಾಳೆಯವರೆಗೆ (ಆಗಸ್ಟ್ 5) ತಡೆಹಿಡಿಯುವಂತೆ ಆದೇಶ ನೀಡಿತ್ತು. ಇದು ಸರ್ಕಾರಕ್ಕೆ ಸಮಾಧಾನ ತಂದಿತ್ತು. ಆದರೆ, ಹೈಕೋರ್ಟ್ ಆದೇಶದ ಬಗ್ಗೆ ನಮಗೆ ತಿಳಿದಿಲ್ಲ, ನಮ್ಮ ಮುಷ್ಕರ ಮುಂದುವರೆಯುತ್ತದೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
Strike – ಅನಂತ ಸುಬ್ಬರಾವ್ ಹೇಳಿದ್ದೇನು?
ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ ಸುಬ್ಬರಾವ್, “ಕೋರ್ಟ್ ಆದೇಶ ನಮಗೆ ತಲುಪಿದೆ, ಆದರೆ ಅದರ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ. ನಮ್ಮ ಮುಷ್ಕರ ನಾಳೆ ಎಂದಿನಂತೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಲಾಯರ್ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಹಾಗಾಗಿ ಪ್ರತಿಭಟನೆ ಮುಂದುವರಿಸುವುದು ಅನಿವಾರ್ಯ” ಎಂದಿದ್ದಾರೆ. Read this also : ಬಸ್ಸಿನಲ್ಲಿ ಪ್ರಯಾಣಿಸುವಾಗ ಎಚ್ಚರ! ತಮಿಳುನಾಡಿನಲ್ಲಿ ತಾಯಿಯ ಕೈಯಿಂದ ಜಾರಿ ಕೆಳಗೆ ಬಿದ್ದ ಮಗು, ವೈರಲ್ ಆದ ವಿಡಿಯೋ…!
Strike – ಸಂಧಾನ ಸಭೆ ವಿಫಲ, ಮುಷ್ಕರಕ್ಕೆ ಅಂತಿಮ ನಿರ್ಧಾರ
ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲಗೊಂಡಿದೆ. 22 ದಿನಗಳ ಹಿಂದೆಯೇ ಮುಷ್ಕರದ ನೋಟಿಸ್ ನೀಡಿದ್ದರೂ, ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ. “38 ತಿಂಗಳ ಬಾಕಿ ಹಣ ಪಾವತಿ ಮತ್ತು ಶೇ.15ರಷ್ಟು ವೇತನ ಹೆಚ್ಚಳ ನಮ್ಮ ಪ್ರಮುಖ ಬೇಡಿಕೆಗಳು. ಸರ್ಕಾರ ಕೇವಲ 14 ತಿಂಗಳ ಹಿಂಬಾಕಿ ಹಣ ನೀಡಲು ಒಪ್ಪಿದ್ದು, ಹೊಸ ವೇತನ ಪರಿಷ್ಕರಣೆಯನ್ನು ಅಧಿವೇಶನದ ಬಳಿಕ ಚರ್ಚಿಸುವುದಾಗಿ ಹೇಳಿದೆ. ಇದು ನಮಗೆ ಒಪ್ಪಿಗೆ ಇಲ್ಲ” ಎಂದು ಅವರು ತಿಳಿಸಿದ್ದಾರೆ.