Urdu language – ಇತ್ತೀಚಿನ ಸರ್ಕಾರಿ ಆದೇಶದಂತೆ ಕಾಲೇಜುಗಳಲ್ಲಿ 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೇ ಅಂತಹ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯಲ್ಲಿ ಓದು ಅವಕಾಶ ನೀಡಿಲ್ಲ. ಇದು ಉರ್ದು ವಿದ್ಯಾರ್ಥಿಗಳಿಗೆ ಮಾಡಿರುವ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್ ಆಕ್ರೋಷ ಹೊರಹಾಕಿದರು.
Urdu language – ಸರ್ಕಾರದ ನಿರ್ಧಾರದಿಂದ ಉರ್ದು ಭಾಷೆಗೆ ಹಿನ್ನಡೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ನಾಸೀರ್, ರಾಜ್ಯದ ಹಲವು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು ಉರ್ದು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯಲು ಆಸಕ್ತಿ ಹೊಂದಿದ್ದಾರೆ. ಆದರೆ, ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಆದೇಶ ಹೊರಬಿದ್ದಿದೆ. “20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಿಲ್ಲ. ಇದರಿಂದ ಉರ್ದು ಭಾಷೆ ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ” ಎಂದು ಅವರು ಖಂಡಿಸಿದರು.
ಕಳೆದ ಎರಡು ತಿಂಗಳ ಹಿಂದೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಯಲ್ಲಿ ಉರ್ದುವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಎರಡು ತಿಂಗಳ ನಂತರ “20ಕ್ಕಿಂತ ಕಡಿಮೆ ದಾಖಲಾತಿ ಹೊಂದಿದ್ದರೆ ಅವರಿಗೆ ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗುವುದಿಲ್ಲ” ಎಂದು ಆದೇಶ ಹೊರಡಿಸಿದ್ದು, ಇದು ಉದ್ದೇಶಪೂರ್ವಕ ನಿರ್ಧಾರ ಎಂದು ನಾಸೀರ್ ಆರೋಪಿಸಿದರು.
Urdu language – ಉರ್ದು ಭಾಷೆ ಉಳಿವಿಗಾಗಿ ಹೋರಾಟಕ್ಕೆ ಕರೆ!
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ರಿಯಾಜ್ ಪಾಷಾ ಕೂಡ ಮಾತನಾಡಿ, ಸರ್ಕಾರದ ಈ ಆದೇಶದಿಂದ ಉರ್ದು ಮಾಧ್ಯಮದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಈ ಸಂಬಂಧ ಯಾವುದೇ ಸಕಾರಾತ್ಮಕ ಆದೇಶ ಬಂದಿಲ್ಲ ಎಂದು ಅವರು ತಿಳಿಸಿದರು.
“ಈ ಪತ್ರಿಕಾಗೋಷ್ಠಿಯ ಮೂಲಕ ನಾವು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡುತ್ತಿದ್ದೇವೆ. ಮುಸ್ಲಿಂ ಸಮುದಾಯದ ಸಚಿವರು ಮತ್ತು ಶಾಸಕರು ಇದರ ಬಗ್ಗೆ ಧ್ವನಿ ಎತ್ತಿ ನಮ್ಮ ಭಾಷೆಯ ಉಳಿವಿಗಾಗಿ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉರ್ದು ವ್ಯಾಸಂಗ ಮಾಡಲು ಅನುಮತಿ ಕೊಡಿಸಬೇಕು” ಎಂದು ರಿಯಾಜ್ ಪಾಷಾ ಒತ್ತಾಯಿಸಿದರು. Read this also : ಆಗಸ್ಟ್ 1 ರಿಂದ UPI ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು: ನೀವು ತಿಳಿದುಕೊಳ್ಳಬೇಕಾದ್ದು ಏನು?
Urdu language – ಉಗ್ರ ಹೋರಾಟದ ಎಚ್ಚರಿಕೆ
ಒಂದು ವೇಳೆ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಉರ್ದು ಭಾಷೆ ಕಲಿಕೆಯ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ, ಮತ್ತು ಈ ನಿರ್ಧಾರವನ್ನು ಹಿಂಪಡೆಯುವವರೆಗೆ ತಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮೊಹಮ್ಮದ್ ನಾಸೀರ್ ಮತ್ತು ರಿಯಾಜ್ ಪಾಷಾ ಸ್ಪಷ್ಟಪಡಿಸಿದರು.